ಬೆಳಗಾವಿ: ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳಾದ ರಾಗಿ, ಗೋಧಿ ಮತ್ತು ಕಡಲೆ ದರ ತುಸು ಹೆಚ್ಚಾಗಿದೆ. ಜೋಳ, ಶೇಂಗಾ ಮತ್ತು ಕುಸುಬೆ ಬೀಜಗಳ ದರ ಕಡಿಮೆಯಾಗಿದೆ. ಉತ್ತರ ಕರ್ನಾಟಕ ಭಾಗದ ರೈತರಿಗೆ ತುಸು ಅನುಕೂಲವಾಗಿದ್ದರೆ, ದಕ್ಷಿಣ ಕರ್ನಾಟಕ ಭಾಗದವರಿಗೆ ದರದ ಬಿಸಿ ತಟ್ಟಿದೆ.

ಕಳೆದ ವರ್ಷ ರಾಜ್ಯದ ಎಲ್ಲೆಡೆ ಬರಗಾಲ ಆವರಿಸಿದ್ದರಿಂದ ಬಿತ್ತನೆ ಬೀಜಗಳ ಕೊರತೆ ಉಂಟಾಗಿದೆ. ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ ಹಾಗೂ ಕರ್ನಾಟಕ ರಾಜ್ಯ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿಯಿಂದ ಬಿತ್ತನೆ ಬೀಜಗಳನ್ನು ಬಿತ್ತಲು ರೈತರಿಗೆ ನೀಡಲಾಗಿತ್ತು. ಈಗ ರೈತರಿಂದ ಖರೀದಿಸಲಾಗಿದೆ.
‘ನಿಗಮ- ಮಂಡಳಿಗಳು ಕೂಡ ರೈತರಿಂದ ಶೇ 23ರಷ್ಟು ಹೆಚ್ಚು ದರ ನೀಡಿ ಖರೀದಿಸಿವೆ. ಅಂಥ ಬೀಜಗಳಿಗೆ ಶೇ 9 ರಿಂದ ಶೇ 13ರಷ್ಟು ದರ ಹೆಚ್ಚಾಗಿದೆ. ರೈತರಿಗೆ ಹೆಚ್ಚು ಲಾಭವಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಗಾರು ಮಳೆ ಕೂಡ ಉತ್ತಮವಾಗಿ ಸುರಿದಿದ್ದರಿಂದ ರೈತರು ಹೊಲಗಳನ್ನು ಹದ ಮಾಡುವಲ್ಲಿ ನಿರತರಾಗಿದ್ದಾರೆ. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ನೀಡಲು ಕೃಷಿ ಇಲಾಖೆ ಸಿದ್ಧತೆ ನಡೆಸಿದೆ.
‘ಕಡಲೆ ಹಾಗೂ ಗೋಧಿ ಬಿತ್ತನೆ ಬೀಜಗಳು ದುಬಾರಿಯಾಗಿವೆ. ಅತಿವೃಷ್ಟಿಯ ಕಾರಣ ನಮ್ಮ ಸೋಯಾಬಿನ್ ಬೆಳೆ ಹಾಳಾಗಿದೆ. ಇದರ ಮಧ್ಯೆಯೇ ಬೀಜಗಳ ದರ ಏರಿಕೆ ಸಂಕಷ್ಟ ತಂದಿದೆ’ ಎಂದು ಸವದತ್ತಿ ತಾಲ್ಲೂಕಿನ ಚಿಕ್ಕುಂಬಿ ಗ್ರಾಮದ ರೈತ ಮೊಹಮ್ಮದ್ ಅಲಿ ದೊಡ್ಡಮನಿ ತಿಳಿಸಿದರು.
Laxmi News 24×7