ಹುಬ್ಬಳ್ಳಿ: ಕಿರಿದಾದ ಮಣ್ಣಿನ ರಸ್ತೆಗಳು, ಚರಂಡಿ ವ್ಯವಸ್ಥೆ ಇಲ್ಲ. ಪದೇ ಪದೇ ರಸ್ತೆಯಲ್ಲಿಯೇ ಹರಿಯುವ ಗಟಾರದ ಕೊಳಚೆ ನೀರು, ಮಳೆಗಾಲದ ವೇಳೆ ಮನೆಯೊಳಗೆ ನುಗ್ಗುವ ಗಲೀಜು ನೀರು, ರಸ್ತೆ ಬದಿಯಲ್ಲಿಯೇ ತ್ಯಾಜ್ಯದ ರಾಶಿ, ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಹಾವಳಿ, ಕೊಳಚೆ ನೀರು ಮಿಶ್ರಿತ ಕುಡಿಯುವ ನೀರು ಪೂರೈಕೆ, ಪಾಲಿಕೆಗೆ ಸಕಾಲಕ್ಕೆ ತೆರಿಗೆ ಪಾವತಿಸಿದರೂ ಸಿಗದ ಮನೆಯ ಹಕ್ಕುಪತ್ರ.
-ಇದು ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ 49 ವಾರ್ಡ್‌ನಲ್ಲಿನ ಹನುಮಂತ ನಗರ, ಶೆಟ್ಟರ ಲೇಔಟ್, ಶಕ್ತಿ ಕಾಲೊನಿ ಸೇರಿದಂತೆ ಲಿಂಗರಾಜ ನಗರದ ಸುತ್ತಮುತ್ತಲಿನ ಕೊಳಚೆ ಪ್ರದೇಶಗಳ ಸ್ಥಿತಿ. ಇಲ್ಲಿನ ನಿವಾಸಿಗಳು ಇಂತಹ ಹಲವು ಸಮಸ್ಯೆ, ಕೊರತೆಗಳ ನಡುವೆಯೇ ನಿತ್ಯ ಬದುಕು ಸಾಗಿಸುತ್ತಿದ್ದಾರೆ.
ಹನುಮಂತ ನಗರದಲ್ಲಿ 300ಕ್ಕೂ ಅಧಿಕ ಕುಟುಂಬಗಳು 25 ವರ್ಷಗಳಿಂದ ವಾಸವಾಗಿವೆ. ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳು ಪಾಲಿಕೆಗೆ ಸಕಾಲಕ್ಕೆ ಆಸ್ತಿ ತೆರಿಗೆ ಪಾವತಿಸುತ್ತಲೇ ಬಂದಿದ್ದಾರೆ. ಆದರೆ, ಇಂದಿಗೂ ಇವರಿಗೆ ಪಾಲಿಕೆಯಿಂದ ಅಧಿಕೃತವಾದ ಡೋರ್ ನಂಬರ್, ನಿವಾಸಿ ಹಕ್ಕುಪತ್ರ ದೊರೆತಿಲ್ಲ. ಇವರ ಬಳಿ ಆರಂಭದಲ್ಲಿ ನಿವೇಶನಕ್ಕೆ ಸಂಬಂಧಿಸಿದ ಹೊಲದ ಮಾಲೀಕರು ನೀಡಿದ ಜಾಗದ ಪತ್ರ ಮಾತ್ರವಿದೆ.
ಬುಡಕಟ್ಟು, ಶೋಷಿತ ಹಾಗೂ ಅಲ್ಪ ಸಮುದಾಯಕ್ಕೆ ಸೇರಿದ ಜನರು ಇಲ್ಲಿ ವಾಸವಾಗಿದ್ದಾರೆ. ಬಹುತೇಕರು ನಿತ್ಯ ಕೂಲಿ ಮಾಡಿಯೇ ಜೀವನ ಸಾಗಿಸುತ್ತಿದ್ದಾರೆ. ಚಿಕ್ಕ ಚಿಕ್ಕ ಮನೆಗಳಲ್ಲಿ ವಾಸವಾಗಿರುವ ಇವರಿಗೆ ಶುದ್ಧ ಕುಡಿಯುವ ನೀರು ಎನ್ನುವುದು ಸಹ ಮರೀಚಿಕೆಯಾಗಿದೆ.