ಬೆಂಗಳೂರು, ಅಕ್ಟೋಬರ್ 07: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೊಸ ಬಸ್ ಖರೀದಿ ಪ್ರಕ್ರಿಯೆ ಮುಂದುವರೆಸಿದೆ. ಜನ ಸಾಮಾನ್ಯರಿಗೆ ಉತ್ತಮ ಅನುಭವ ನೀಡುವ ಉದ್ದೇಶದಿಂದ ಹೊಸ 9600 ವೋಲ್ವೊ ಮಲ್ಟಿಎಕ್ಸೆಲ್ ಮಾದರಿಯ ‘ಐರಾವತ ಕ್ಲಬ್ ಕ್ಲಾಸ್ 2.0’ ಬಸ್‌ಗಳನ್ನು ಖರೀದಿಸುತ್ತಿದೆ.
ಈಗಾಗಲೇ ಒಂದನ್ನು ಪ್ರಾಯೋಗಿಕವಾಗಿ ಪರಿಶೀಲಿಸಿರುವ ಸಾರಿಗೆ ಸಚಿವರು ಇಂದು ಖುದ್ದು ತಯಾರಿಕಾ ಘಟಕ್ಕೆ ಭೇಟಿ ನೀಡಿ ವೀಕ್ಷಿಸಿದ್ದಾರೆ.
ಹೌದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಸೋಮವಾರ ಹೊಸಕೋಟೆ ಬಳಿಯಿರುವ ವೋಲ್ವೋ ಬಸ್ ತಯಾರಿಕಾ ಫ್ಯಾಕ್ಟರಿಗೆ ಭೇಟಿ ನೀಡಿದರು. ತಯಾರಾಗುತ್ತಿರುವ ವಿನೂತನ, ವಿಶೇಷತೆಗಳ ಬಸ್ಸನ್ನು ವೀಕ್ಷಿಸಿ, ಅವುಗಳನ್ನು ರಸ್ತೆಗೆ ಇಳಿಸುವ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
ಐರಾವತ ಕ್ಲಬ್ ಕ್ಲಾಸ್ 2.0 ಮಾದರಿಯ 20 ಬಸ್ಸುಗಳನ್ನು ಸಾರಿಗೆ ಇಲಾಖೆಯು ಇದೇ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ KSRTC ನಿಗಮಕ್ಕೆ ಸೇರ್ಪಡೆ ಮಾಡಿಕೊಳ್ಳಲಿದೆ. ಪ್ರತಿ ಒಂದು ಬಸ್‌ಗೆ 1.78 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಸದ್ಯ ಸಾರಿಗೆ ನಿಗಮದಲ್ಲಿ ಒಟ್ಟು 443 ಬಸ್ಸುಗಳು ಐಷಾರಾಮಿ ಬಸ್ಸುಗಳಿವೆ. ಇವು ಸಹ ಕೆಲವೇ ದಿನಗಳಲ್ಲಿ ರಸ್ತೆಗೆ ಇಳಿಯಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.