ಯಾವುದೋ ಒಂದು ದೊಡ್ಡ ತಪ್ಪಿನಿಂದ ಜೈಲುಪಾಲಾಗುವ ಖೈದಿಗಳು (Prisoners), ಒಂದು ಸಣ್ಣ ಬೆಳಕಿನಡಿ, ನಾಲ್ಕು ಗೋಡೆಗಳ ಮಧ್ಯೆ ಸೆರೆಮನೆ ವಾಸ ಅನುಭವಿಸಬೇಕಿರುತ್ತದೆ. ಇದು ಪ್ರತಿಯೊಂದು ಜೈಲಿನ ಮೂಲ ನಿಯಮ. ಇಲ್ಲಿ ಯಾವ ಐಷಾರಾಮಿ ಜೀವನ, ಭರ್ಜರಿ ಊಟ, ಉತ್ತಮ ಸೌಕರ್ಯ, ಸೌಲಭ್ಯಗಳು ಇರುವುದಿಲ್ಲ.
ಜಗತ್ತಿನ ಮೂಲೆ ಮೂಲೆಯಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತಿವೆ ಎಂಬುದರ ಅರಿವಿರುವುದಿಲ್ಲ. ಖುಷಿ, ಆನಂದದ ಕ್ಷಣಕ್ಕೆ ಜಾಗವಿರುವುದಿಲ್ಲ. ಹೀಗಿರುವಾಗ ಈ ಒಂದು ಸರ್ಕಾರ ತಮ್ಮ ರಾಜ್ಯದಲ್ಲಿರುವ ಜೈಲಿನ ಖೈದಿಗಳಿಗೆ ದಸರಾ ಹಬ್ಬದ ಪ್ರಯುಕ್ತ ನಾಲ್ಕು ದಿನಗಳ ಕಾಲ ಭರ್ಜರಿ ಮಾಂಸದೂಟದ (Non Veg Dishes) ಮೆನು ಪರಿಚಯಿಸಿದೆ. ಈ ಸುದ್ದಿ ಖೈದಿಗಳಲ್ಲಿ ಹಬ್ಬದ ಆನಂದ, ಕಳೆ ತಂದಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಈ ಹೊಸ ಮೆನು ಇದೇ ಅಕ್ಟೋಬರ್ 9ರಿಂದ 12 ರವರೆಗೆ ಇರಲಿದೆ. ಈ ಆಹಾರ ಪದಾರ್ಥಗಳನ್ನು ಸ್ವತಃ ಖೈದಿಗಳೇ ತಯಾರಿಸುತ್ತಾರೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.