ಸವದತ್ತಿ: ತಾಲ್ಲೂಕಿನ ಹಿರೇಕುಂಬಿ ಗ್ರಾಮದ ಹೊರವಲಯದಲ್ಲಿ ಕಾಲುವೆ ಬದಿ ಇದ್ದ ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿದ್ದವರನ್ನು ಗ್ರಾಮಸ್ಥರು ತಡೆ ಹಿಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಕಾಲುವೆ ಬದಿಯಲ್ಲಿ ಬೆಳೆದಿದ್ದ ಬೃಹದಾಕಾರದ ನೀಲಗಿರಿ ಮರಗಳನ್ನು ಇಲಾಖೆಯ ಸಿಬ್ಬಂದಿ ಸಮ್ಮುಖದಲ್ಲಿ ಕಡಿದು ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದಾಗ ಅನುಮಾನಗೊಂಡ ಗ್ರಾಮಸ್ಥರು ವಾಹನವನ್ನು ಅಡ್ಡಗಟ್ಟಿ ವಿಚಾರಿಸಿದರು.
ಈ ವೇಳೆ ಇದು ಅಕ್ರಮ ಸಾಗಣೆ ಎಂದು ಸಂಶಯ ವ್ಯಕ್ತಪಡಿಸಿ ಘಟನಾ ಸ್ಥಳದಲ್ಲಿ ಹಾಜರಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
‘ತಾಲ್ಲೂಕಿನಾದ್ಯಂತ ಮರಗಳ ಕಳವು ಇಲಾಖೆಯ ಭಯವಿಲ್ಲದೇ ಹಗಲಿನಲ್ಲಿ ರಾಜಾರೋಷವಾಗಿ ನಡೆಯುತ್ತಿವೆ. ಕಣ್ಣಿಗೆ ಗೋಚರಿಸಿದ ಘಟನೆ ಇದೊಂದೇ. ಇಂತಹ ಘಟನೆಗಳು ನಿತ್ಯ ನಡೆಯುತ್ತಲೇ ಇರುತ್ತವೆ. ಇದರಲ್ಲಿ ಅರಣ್ಯ ಇಲಾಖೆಯ ಪಾಲುದಾರಿಕೆ ಇಲ್ಲದೇ ಇಷ್ಟೊಂದು ರಾಜಾರೋಷವಾಗಿ ಮರಗಳ ಸಾಗಣೆ ಸಾಧ್ಯವೇ ಇಲ್ಲ. ಮರಗಳ ರಕ್ಷಣೆಗೆಂದೇ ನಿಯುಕ್ತಿಗೊಂಡ ಇಲಾಖೆಯ ಸಿಬ್ಬಂದಿ ಸಮ್ಮುಖದಲ್ಲಿ ಮರಗಳನ್ನು ಕಡಿಯುತ್ತಿರುವದು ದುರದೃಷ್ಟಕರ ಸಂಗತಿ. ಲಕ್ಷಾಂತರ ಮೌಲ್ಯದ ಮರಗಳು ಇಲಾಖೆಯ ಶಾಮೀಲಿನಲ್ಲಿ ಖದೀಮರ ಪಾಲಾಗುತ್ತಿವೆ’ ಎಂದು ಸೇರಿದ ಗ್ರಾಮಸ್ಥರು ಆರೋಪಿಸಿದರು.