ತಿರುಪತಿ,ಅ.4-ತಿರುಮಲ ಶ್ರೀಗಳ ದರ್ಶನಕ್ಕೆ ಶಿಫಾರಸ್ಸು ಪತ್ರಗಳ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಯಾವುದೇ ಶಿಫಾರಸ್ಸುಗಳಿಲ್ಲದೆ ಜನಸಾಮಾನ್ಯರು ಸುಲಭವಾಗಿ ತಿರುಮಲ ಶ್ರೀಕ್ಷೇತ್ರಕ್ಕೆ ಭೇಟಿ ನೀಡುವಂತೆ ಮುಂಗಡ ಬುಕಿಂಗ್ ವ್ಯವಸ್ಥೆ ಜಾರಿಗೆ ತರಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇತ್ತೀಚಿನ ಪರಿಶೀಲನೆಯಲ್ಲಿ ಹಲವು ಸಲಹೆಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.
ವಿಶ್ವಾದ್ಯಂತ ಲಕ್ಷಾಂತರ ಜನರ ದೈನಂದಿನ ಜೀವನದ ಭಾಗವಾಗಿರುವ ವಾಟ್ಸಾಪ್ ಮೂಲಕವೇ ಟಿಕೆಟ್ ಬುಕ್ ಮಾಡಲು ಅನುಕೂಲವಾಗುವಂತೆ ಆಂಧ್ರಪ್ರದೇಶ ಸರ್ಕಾರ ಚಿಂತನೆ ನಡೆಸಿದೆ.
ವಾಟ್ಸಾಪ್ ಮೂಲಕ ಸುಲಭವಾಗಿ ಸಿನಿಮಾ ಟಿಕೆಟ್, ಗ್ಯಾಸ್ ಬುಕ್ಕಿಂಗ್, ಫ್ಲೈಟ್ ಟಿಕೆಟ್ ಬುಕ್ ಮಾಡುವಾಗ, ಭಕ್ತರು ತಮ ಇಚ್ಛೆಯ ದಿನದಂದು ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶ ಹೊಂದಿದೆ.
ತಿರುಮಲ ತಿರುಪತಿ ದೇವಸ್ಥಾನದಿಂದ ವಾಟ್ಸಪ್ ಮೂಲಕ ದರ್ಶನ ಬುಕ್ಕಿಂಗ್ ಸೇವೆ ಆರಂಭಿಸಿ ಹಂತಹಂತವಾಗಿ ಎಲ್ಲ ದೇವಸ್ಥಾನಗಳಲ್ಲೂ ಲಭ್ಯವಾಗುವಂತೆ ಹಾಗೂ ಶ್ರೀವಾರಿ ದರ್ಶನದ ಜೊತೆಗೆ ಇತರೆ ಸೇವೆಗಳ ಬೆಲೆಯನ್ನು ಕಡಿಮೆ ವೆಚ್ಚದಲ್ಲಿ ಸಾಧ್ಯವಾದಷ್ಟು ಸೌಲಭ್ಯ ಕಲ್ಪಿಸುವ ಸರ್ಕಾರದ ಆಲೋಚನೆಯಾಗಿದೆ.