ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತಿದೆ. ಒಂದೆಡೆ ವಿಪಕ್ಷಗಳಿಂದ ಸಿಎಂ ರಾಜೀನಾಮೆಗೆ ಆಗ್ರಹ ಕೇಳಿಬಂದಿದೆ. ಸ್ವಪಕ್ಷದಲ್ಲಿ ನಾನೇ ಸಿಎಂ ಎನ್ನುವವರ ಸಂಖ್ಯೆಯೂ ಹೆಚ್ಚಾಗಿದೆ. ಮತ್ತೊಂದೆಡೆ ಸಿಎಂ ವಿರುದ್ಧ ದಾಖಲಾಗಿರುವ ಎಫ್‌ಐಆರ್, ಎ1 ಆರೋಪಿ ಪಟ್ಟ ಕೂಡ ಸಿದ್ದರಾಮಯ್ಯ ಅವರ ಕುರ್ಚಿಯನ್ನು ಅಲುಗಾಡಿಸುತ್ತಿದೆ.
ಈ ಸುಳಿಯಿಂದ ಪಾರಾಗುವುದೇ ಸಿದ್ದರಾಮಯ್ಯ ಅವರಿಗೆ ಈಗಿರುವ ಸವಾಲಾಗಿದೆ.
ಮೊದಲಿಗೆ ಸಿಎಂ ರಾಜೀನಾಮೆಗೆ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ನಿಂದ ಮಾತ್ರ ಒತ್ತಾಯ ಕೇಳಿಬಂದಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಕಾಂಗ್ರೆಸ್ ಕೂಡ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂದು ನಿರ್ಧರಿಸಿದೆಯೇ? ಎನ್ನುವ ಅನುಮಾನಗಳನ್ನು ಹುಟ್ಟುಹಾಕಿದೆ.
ಇದಕ್ಕೆ ಪುಷ್ಟಿ ನೀಡುವಂತಹ ಬೆಳವಣಿಗೆಗಳು ಕಾಂಗ್ರೆಸ್‌ನಲ್ಲೇ ನಡೆದಿರುವುದನ್ನು ನಾವು ಗಮನಿಸಬಹುದು. ಮುಡಾ ಕೇಸ್ ಸಿದ್ದರಾಮಯ್ಯ ಅವರನ್ನು ಸುತ್ತಿಕೊಂಡಾಗ ಮೊದಲಿಗೆ ಕಾಂಗ್ರೆಸ್ ಶಾಸಕರು, ಸಚಿವರು, ಸಂಸದರು ಹಾಗೂ ಹೈಕಮಾಂಡ್ ಕೂಡ ಒಗ್ಗಟ್ಟು ಪ್ರದರ್ಶಿಸಿತ್ತು. ನಾವೆಲ್ಲ ಸಿದ್ದರಾಮಯ್ಯ ಅವರ ಬೆಂಬಲಕ್ಕಿದ್ದೇವೆ ಎನ್ನುವ ಸಂದೇಶ ಕೂಡ ಸಾರಿತ್ತು. ಇದರಿಂದ ಮೊದಲಿಗೆ ಸಿದ್ದರಾಮಯ್ಯ ಅವರಿಗೆ ಆನೆಬಲ ಬಂದಿದ್ದಂತೂ ನಿಜ.
ಇದರ ನಡುವೆಯೇ ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಆಗಬೇಕು ಎನ್ನುವವರ ಪಟ್ಟಿ ಹೆಚ್ಚುತ್ತಾ ಹೋಯಿತು. ಮೊದಲಿನಿಂದಲೂ ಡಿಸಿಎಂ ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್ ಅವರ ಹೆಸರುಗಳು ಮಾತ್ರ ಸಿಎಂ ರೇಸ್‌ನಲ್ಲಿ ಸದ್ದು ಮಾಡುತ್ತಿತ್ತು. ಆದರೆ, ಈಗ ಎಂ.ಬಿ.ಪಾಟೀಲ್, ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ನಾಯಕರು ನಾನು ಕೂಡ ಸಿಎಂ ಆಗಬೇಕೆಂದಿದ್ದೇನೆ ಎಂದು ಇಂಗಿತ ವ್ಯಕ್ತಪಡಿಸಿದ್ದರು.