ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸಲು ಬೆಂಗಳೂರಿನ ಬ್ಯಾಟರಾಯನಪುರ ವ್ಯಾಪ್ತಿಯ ಚಿಕ್ಕಜಾಲದಲ್ಲಿ ಹೊಸ ಅಡುಗೆ ಮನೆ ಇಂದು ಉದ್ಘಾಟನೆಗೊಂಡಿದೆ. ಅಕ್ಷಯ ಪಾತ್ರ ಫೌಂಡೇಶನ್ ಹಾಗೂ ರಾಜ್ಯ ಸರ್ಕಾರ ಸಹಯೋಗದಲ್ಲಿ ನಿರ್ಮಿಸಿರುವ ಈ ವಿಶಾಲ ಹಾಗೂ ಸುಸಜ್ಜಿತ ಅಡುಗೆ ಮನೆಗೆ ಸಚಿವ ಕೃಷ್ಣಬೈರೇಗೌಡ ಅವರು ಚಾಲನೆ ನೀಡಿದರು.
ಇದು ಅಕ್ಷಯ ಪಾತ್ರ ಫೌಂಡೇಷನ್ ಆರಂಭಿಸಿರುವ 75ನೇ ಅಡಿಗೆ ಮನೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವ ಕೃಷ್ಣಬೈರೇಗೌಡ, ಇದೀಗ ಬ್ಯಾಟರಾಯನಪುರ ಕ್ಷೇತ್ರದಲ್ಲಿ ತಮ್ಮ 75ನೇ ಅಡುಗೆ ಮನೆ ತೆರೆಯುತ್ತಿರುವುದು ಸಂತಸ ತಂದಿದೆ. ಮಕ್ಕಳಿಗೆ ಹೆಚ್ಚು ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಲು ಅಕ್ಷಯ ಪಾತ್ರ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಕ್ಕಜಾಲದಲ್ಲಿರುವ ಈ ಅಡುಗೆಮನೆಯು 200ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 35,000 ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ 70,000 ಮಕ್ಕಳಿಗೆ ಊಟ ಸಿದ್ಧಪಡಿಸುವ ಸಾಮರ್ಥ್ಯವನ್ನು ಈ ಅಡುಗೆ ಮನೆ ಹೊಂದಿದೆ. ವಿಶೇಷವಾಗಿ ಪ್ರವಾಹ, ಕೋವಿಡ್‌ನಂತಹ ಸಮಯದಲ್ಲೂ ಈ ಅಡುಗೆ ಮನೆಯ ನೆರವು ಬಹಳ ಪ್ರಯೋಜನಕಾರಿ ಎಂದರು.
ನಮ್ಮ ಯೋಜನೆ ದೇಶಕ್ಕೇ ಮಾದರಿ: ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಪೌಷ್ಠಿಕಾಂಶಯುಕ್ತ ಬಿಸಿಯೂಟ ನೀಡುವ ಯೋಜನೆಯಲ್ಲಿ ನಮ್ಮ ಕರ್ನಾಟಕವುಡೀ ದೇಶಕ್ಕೆ ಮಾದರಿಯಾಗಿದೆ. ತಮಿಳುನಾಡಿನ ಮಾಜಿ ಸಿಎಂ ಕಾಮರಾಜರ್ ಅವರು ದೇಶದಲ್ಲೇ ಮೊದಲ ಬಾರಿಗೆ ಶಾಲಾ ಮಕ್ಕಳಿಗೆ ಬಿಸಿಯೂಟದ ಯೋಜನೆ ಆರಂಭಿಸಿದ್ದರು. ಇಂದು ನಮ್ಮ ಕರ್ನಾಟಕದ ಬಿಸಿಯೂಟ ಯೋಜನೆಯು ಇಡೀ ದೇಶಕ್ಕೆ ಮಾದರಿಯಾಗಿ ಸುಪ್ರೀಂಕೋರ್ಟ್‌ನಿಂದಲೂ ಬೇಷ್ ಎನಿಸಿಕೊಂಡಿದೆ ಎಂದು ಶ್ಲಾಘಿಸಿದರು.