ಯಾದಗಿರಿ: ಜಿಲ್ಲೆಯ ಗುಡ್ಡಗಳಲ್ಲಿ ಯಥೇಚ್ಛವಾಗಿ ಬೆಳೆದ ಸೀತಾಫಲ ಹಣ್ಣುಗಳನ್ನು ವ್ಯಾಪಾರಿಗಳು ಅರಣ್ಯಕ್ಕೆ ತೆರಳಿ ಕಿತ್ತು ತಂದು ನಗರ ಪ್ರದೇಶಗಳಲ್ಲಿ ಮಾರುತ್ತಿದ್ದಾರೆ.
ಯಾದಗಿರಿ ತಾಲ್ಲೂಕಿನ ಬಂದಳ್ಳಿ, ಯಡ್ಡಳ್ಳಿ, ಯರಗೋಳ, ಹತ್ತಿಕುಣಿ, ಆಶನಾಳ, ಬೆಳಗೇರಾ, ಅರಕೇರಾ (ಕೆ), ಕಟಗಿ, ಶಹಾಪುರ, ಗುರಮಠಕಲ್ ತಾಲ್ಲೂಕಿನ ಚಿಂತನಹಳ್ಳಿ, ಕಂದಕೂರ, ತಾತಳಗೇರಾ, ಬೋರಾಬಂಡ, ಧರ್ಮಪುರ, ಮಿನಸಾಪುರ ಸೇರಿದಂತೆ ವಿವಿಧ ಗುಡ್ಡಗಾಡು ಪ್ರದೇಶದಲ್ಲಿ ನೈಸರ್ಗಿಕವಾಗಿ ಸೀತಾಫಲ ಬೆಳೆದು ನಿಂತಿದೆ.
ಲಂಬಾಣಿ ಸಮಾಜದ ಮಹಿಳೆಯರು ನಗರದ ಹಳೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿದಿನ ಬೆಳಿಗ್ಗೆ 7ರಿಂದ 10ಗಂಟೆವರೆಗೆ ಮಹಿಳೆಯರು ಬುಟ್ಟಿಗಳಲ್ಲಿ ತಂದು ಮಾರಾಟ ಮಾಡುತ್ತಿದ್ದಾರೆ. ಮಹಿಳೆಯರು ನೈಸರ್ಗಿಕ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಾ ಎರಡ್ಮೂರು ತಿಂಗಳು ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿದ್ದಾರೆ.
ಸಣ್ಣ ಗಾತ್ರ ಒಂದು ಹಣ್ಣಿಗೆ ₹10, ಮಧ್ಯಮ ಗಾತ್ರದ ಹಣ್ಣಿಗೆ ₹15 ಮಾರಾಟ ಮಾಡುತ್ತಿದ್ದಾರೆ. ಬುಟ್ಟಿಗೆ ಲೆಕ್ಕದಲ್ಲಿ ₹250, ₹300ಕ್ಕೆ ಮಾರಾಟ ಮಾಡುತ್ತಿದ್ದಾರೆ.
ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಗುಡ್ಡಗಳಲ್ಲಿ ಹಣ್ಣು ಸಿಗುತ್ತಿದೆ. ಮಧ್ಯಾಹ್ನ, ಸಂಜೆ ವೇಳೆ ಗಿಡದಿಂದ ಹಣ್ಣುಗಳನ್ನು ಕಿತ್ತು ತಂದು ಬೆಳಿಗ್ಗೆ ವೇಳೆಗೆ ಮಾರಾಟಕ್ಕೆ ತರುವುದು ವಾಡಿಕೆಯಾಗಿದೆ.
‘ಬೆಟ್ಟಗುಡ್ಡಗಳಲ್ಲಿ ಸೀತಾಫಲ ಸಿಗುವುದರಿಂದ ಯಾವುದೇ ರೋಗರುಜಿನ ಭಯವಿಲ್ಲ. ಹೀಗಾಗಿ ನಮ್ಮ ಮನೆಗೆ ಬೇಕಾದ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತೇನೆ’ ಎಂದು ನಗರ ನಿವಾಸಿ ಹಣಮಂತ ಶೆಟ್ಟಿ ಹೇಳಿದರು.