ಕುಷ್ಟಗಿ: ಎಸ್‌ಎಸ್‌ಎಲ್‌ಸಿ ಮಧ್ಯವಾರ್ಷಿಕ ಪರೀಕ್ಷೆಯನ್ನು ಮುಖ್ಯಪರೀಕ್ಷೆ ಮಾದರಿಯಲ್ಲಿಯೇ ಏಕರೂಪದ ಪ್ರಶ್ನೆಪತ್ರಿಕೆಗಳ ಮೂಲಕ ನಡೆಸಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಿಸುವ ಮತ್ತು ಪರೀಕ್ಷೆ ಪಾವಿತ್ರ್ಯ ಕುರಿತು ಮಕ್ಕಳು, ಪಾಲಕರಿಗೆ ಜಾಗೃತಿ ಮೂಡಿಸಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಧ್ಯವಾರ್ಷಿಕ ಪರೀಕ್ಷೆ ನಡೆಸುತ್ತಿದೆ.
ಆದರೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮತ್ತು ಸುರಕ್ಷತೆಯೇ ಇಲ್ಲದೆ ಅವ್ಯವಸ್ಥೆಯಿಂದಾಗಿ ಪ್ರಶ್ನೆಪತ್ರಿಕೆಗಳು ಹಣಕ್ಕೆ ಬಿಕರಿಯಾಗುತ್ತಿರುವ ಆರೋಪಗಳು ಕೇಳಿ ಬಂದಿವೆ.
ಸೆ. 24ರಿಂದ ಆಯಾ ಶಾಲೆಗಳಲ್ಲಿ ಆರಂಭಗೊಂಡಿರುವ ಅರ್ಧವಾರ್ಷಿಕ ಪರೀಕ್ಷೆಗಳು ನಾಳೆಗೆ ಕೊನೆಗೊಳ್ಳಲಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಶ್ನೆಪತ್ರಿಕೆಗಳನ್ನು ಮಂಡಳಿಯೇ ಸಿದ್ಧಪಡಿಸಿ ಕಳುಹಿಸುತ್ತಿದ್ದರೆ 8-9ನೇ ತರಗತಿಯ ಪ್ರಶ್ನೆಪತ್ರಿಕೆಗಳನ್ನು ಏಕರೂಪದಲ್ಲಿ ಜಿಲ್ಲಾ ಹಂತದಲ್ಲಿ ಸಿದ್ಧಪಡಿಸಲಾಗಿದೆ. ಆದರೆ ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿ ಕಳಿಸುವ ಬದಲು ವೆಬ್‌ಸೈಟ್ ಲಿಂಕ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಮಾಡಿರುವುದು ಎಡವಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ.