ಬೆಳಗಾವಿ: ‘ಈ ಹಿಂದೆ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರೋಪ ಕೇಳಿಬಂದಾಗ, ನೈತಿಕತೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು. ಈಗ ಅವರ ನೈತಿಕತೆ ಎಲ್ಲಿಗೆ ಹೋಗಿದೆ’ ಎಂದು ಶಾಸಕ ಅಭಯ ಪಾಟೀಲ ಪ್ರಶ್ನಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಪ್ರಕರಣದಲ್ಲಿ ಎಫ್‌ಐಆರ್ ದಾಖಲಾದರೂ ಸಿದ್ದರಾಮಯ್ಯ ರಾಜೀನಾಮೆ ಕೊಡದ ವಿಚಾರವಾಗಿ, ಇಲ್ಲಿ ಭಾನುವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.
‘ರಾಜ್ಯದಲ್ಲಿ ಅಧಿಕಾರಕ್ಕೆ ಅಂಟಿಕೊಳ್ಳದೆ ಕೆಲಸ ಮಾಡಿದ ಕೆಲವೇ ರಾಜಕಾರಣಿಗಳ ಪೈಕಿ ಸಿದ್ದರಾಮಯ್ಯ ಕೂಡ ಒಬ್ಬರು. ಅವರ ಬಗ್ಗೆ ನಿಜವಾಗಿಯೂ ಬಹಳ ಗೌರವವಿತ್ತು. ಆದರೆ, ಈಗ ಕುರ್ಚಿಗೆ ಫೆವಿಕಾಲ್ ಹಚ್ಚಿಕೊಂಡು ಕುಳಿತಿದ್ದಾರೆ. ಯಡಿಯೂರಪ್ಪ ಅವರಿಗೊಂದು ಕಾಯ್ದೆ ಮತ್ತು ನಿಮಗೊಂದು ಕಾಯ್ದೆಯೇ?’ ಎಂದು ವ್ಯಂಗ್ಯವಾಡಿದರು.