ರಾಣೆಬೆನ್ನೂರು: ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೆಳೆ ಕಟಾವಿಗೆ ಬಂದಿದೆ. ಜಿಲ್ಲೆಯ ಹಲವು ತಾಲ್ಲೂಕು ಹಾಗೂ ಹೊರ ಜಿಲ್ಲೆಗಳ ರೈತರು ತಾವು ಬೆಳೆದಿರುವ ಮೆಕ್ಕೆಜೋಳವನ್ನು ಮಾರಾಟ ಮಾಡಲು ನಗರದ ಎಪಿಎಂಸಿಗೆ ತರುತ್ತಿದ್ದಾರೆ. ಬದಲಾದ ವಾತಾವರಣದಿಂದಾಗಿ ಮೆಕ್ಕೆಜೋಳದ ತೇವಾಂಶ ಹೆಚ್ಚಾಗಿದ್ದು, ಬೆಲೆಯಲ್ಲಿಯೂ ಕುಸಿತ ಕಂಡುಬರುತ್ತಿದೆ.
ಜಿಲ್ಲೆಯಲ್ಲಿ ವಾರದಿಂದ ವಾತಾವರಣ ಹೆಚ್ಚು ತಂಪಾಗಿದ್ದು, ಅಲ್ಲಲ್ಲಿ ಮಳೆ ಸುರಿಯುತ್ತಿದೆ. ಕೆಲ ರೈತರು, ಮೆಕ್ಕೆಜೋಳದ ತೆನೆ ಮುರಿದು ಅಲ್ಲಲ್ಲಿ ರಾಶಿ ಮಾಡಿ ಇರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮೆಕ್ಕೆಜೋಳ ಕಟಾವು ಯಂತ್ರಗಳಿಗೆ ಬೇಡಿಕೆ ಬಂದಿದೆ. ರೈತರು ಹೊಲದಿಂದ ಮೆಕ್ಕೆಜೋಳ ಕಟಾವು ಮಾಡಿ ನೇರವಾಗಿ ಹಸಿ ಬಿಸಿ ಕಾಳುಗಳನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಎಪಿಎಂಸಿ ಮಾರುಕಟ್ಟೆಗೆ ತರುತ್ತಿದ್ದಾರೆ. ಈ ವಾರದಲ್ಲಿ ನಿತ್ಯವೂ 10ರಿಂದ 15ಸಾವಿರಕ್ಕೂ ಹೆಚ್ಚು ಮೆಕ್ಕೆಜೋಳದ ಚೀಲಗಳು ಆವಕವಾಗಿವೆ.
ತಾಲ್ಲೂಕಿನ ಹೂಲಿಹಳ್ಳಿ ಮೆಗಾ ಮಾರುಕಟ್ಟೆ, ಎಪಿಎಂಸಿ ಯಾರ್ಡ್ ಮತ್ತು ಹೆದ್ದಾರಿಯ ಸರ್ವೀಸ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆಕ್ಕೆಜೋಳ ಒಣಗಿಸಲು ಹಾಕಿರುವುದು ಕಂಡುಬರುತ್ತಿದೆ. ಮೆಕ್ಕೆಜೋಳದ ತೇವಾಂಶ ಹೆಚ್ಚಾಗಿದ್ದರಿಂದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಸದ್ಯಕ್ಕೆ ಕಡಿಮೆಯಾಗಿದೆ.