ಬೆಂಗಳೂರು, ಸೆಪ್ಟೆಂಬರ್ 28: ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನಂ ನಾಯ್ಡು ಅವರ ವಿರುದ್ಧ ಬೆದರಿಕೆ, ಜಾತಿ ನಿಂದನೆ ಹಾಗೂ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಇದೀಗ ಮುನಿರತ್ನ ಅವರಿಗೆ ಮತ್ತೊಂದು ಶಾಕ್ ಎದುರಾಗಿದೆ.
ಬಿಜೆಪಿ ಶಾಸಕ ಮುನಿರತ್ನ ಮನೆ ಮೇಲೆ ಶನಿವಾರ ಬೆಳ್ಳಂಬೆಳಗ್ಗೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವಿಧಿ ವಿಜ್ಞಾನ ಪ್ರಾಯೋಗಾಲಯದ ತಜ್ಞರನ್ನು ಕೂಡ ಜೊತೆಗೆ ಕರೆದೊಯ್ದಿದ್ದಿರುವ ಅಧಿಕಾರಿಗಳ ತಂಡ, ಮಹತ್ವದ ಮಾಹಿತಿ ಕಲೆಹಾಕಿದೆ ಎನ್ನಲಾಗಿದೆ.
ಬೆಂಗಳೂರಿನ ವೈಯಾಲಿಕಾವಲ್ ನಿವಾಸದ ಮೇಲೆ ಎಸ್ಐಟಿ ಎಸಿಪಿ ಕವಿತಾ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿದೆ. ವೈಯಾಲಿಕಾವಲ್ ನಿವಾಸ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಮುನಿರತ್ನ ಅವರು ಮೂರು ಕೇಸ್ಗಳ ಸಂಬಂಧ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಎಸ್ ಐಟಿ ಅಧಿಕಾರಿಗಳು ಮಾತ್ರವಲ್ಲದೇ ಎಫ್ಎಸ್ಎಲ್ ತಂಡವು ಸಹ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ.
ಗುತ್ತಿಗೆದಾರ ಚಲುವರಾಜು ಅವರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಮೊದಲು ಮುನಿರತ್ನ ಬಂಧನವಾಗಿತ್ತು. ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಅವರು ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇನ್ನೂ ಬಿಡುಗಡೆಯಾಗುತ್ತಿದ್ದಂತೆ ಅತ್ಯಾಚಾರ ಪ್ರಕರಣದಲ್ಲಿ ಮುನಿರತ್ನ ಬಂಧನಕ್ಕೊಳಗಾಗಿದ್ದರು. ಅಲ್ಲದೇ ಏಡ್ಸ್ ರೋಗಿಯ ರಕ್ತವನ್ನ ಇಂಜೆಕ್ಟ್ ಮಾಡಲು ಪ್ಲಾನ್ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿದ್ದು, ಇದೀಗ ಮುನಿರತ್ನ ಅವರ ವಿರುದ್ಧ ದಿನಕ್ಕೊಂದು ಪ್ರಕರಣಗಳು ಬೆಳಕಿಗೆ ಬರುತ್ತಿವೆ.