ರಾಣೆಬೆನ್ನೂರು: ಹವಾಮಾನದ ಬದಲಾವಣೆಯಿಂದಾಗಿ ತಾಲ್ಲೂಕಿನಾದ್ಯಂತ ಚಿಕ್ಕಮಕ್ಕಳಲ್ಲಿ ಕೆಮ್ಮು, ಜ್ವರ, ನೆಗಡಿ ಪ್ರಕರಣಗಳು ಹೆಚ್ಚಾಗಿವೆ.
ನಗರದ ಪ್ರಮುಖ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಿಗೆ ಭೇಟಿ ನೀಡುತ್ತಿರುವವರಲ್ಲಿ ಶೇ 30 ರಿಂದ 40ಕ್ಕೂ ಹೆಚ್ಚು ಮಂದಿ ಜ್ವರ ತಪಾಸಣೆಗೆ ಒಳಗಾಗುತ್ತಿದ್ದಾರೆ.
ಇವರಲ್ಲಿ ಮಕ್ಕಳೇ ಹೆಚ್ಚಾಗಿದ್ದಾರೆ. ತಾಪಮಾನ ಏರಿಳಿತ, ಗಾಳಿ ಸಹಿತ ಮಳೆ ಹಾಗೂ ಬಿಸಿಲಿನಿಂದಾಗಿ ವೈರಾಣು ಜ್ವರವು ಮಕ್ಕಳನ್ನು ಹೆಚ್ಚಾಗಿ ಕಾಡುತ್ತಿದೆ. ಇನ್ನೊಂದು ಕಡೆ, ಶೀತ- ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಗಳೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ.
‘ತಾಲ್ಲೂಕಿನ ಒಟ್ಟು 14 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನಕ್ಕೆ 10 ರಿಂದ 15 ರೋಗಿಗಳನ್ನು ತಪಾಸಣೆ ಮಾಡಲಾಗುತ್ತದೆ. ಕಳೆದ ವಾರ ಎರಡು-ಮೂರು ದಿನಗಳಲ್ಲಿ ದಿನಕ್ಕೆ ನೂರಾರು ರೋಗಿಗಳು ಜ್ವರ, ನೆಗಡಿ, ಕೆಮ್ಮಿನಿಂದ ಬಳಲಿ ತಪಾಸಣೆಗೆ ಬಂದಿದ್ದರು. ವಾತಾವರಣ ಬದಲಾವಣೆಯಾದಾಗ ಜ್ವರದ ಪ್ರಕರಣಗಳು ಕಾಣಿಸುತ್ತವೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ರಾಜೇಶ್ವರಿ ಕದರಮಂಡಲಗಿ ಹೇಳಿದರು.