ಧಾರವಾಡ: ಗ್ಯಾರಂಟಿ ಸಮಾವೇಶದಲ್ಲಿ ಗೋಲ್‌ಮಾಲ್ ನಡೆದಿರುವ ಅನುಮಾನವೊಂದು ಎದ್ದಿದ್ದು, ಈ ಸಂಬಂಧ ತನಿಖೆಗೆ ಆಗ್ರಹಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಧಾರವಾಡದ ಕೆಸಿಡಿ ಮೈದಾನ, ಹುಬ್ಬಳ್ಳಿಯ ರೈಲ್ವೆ ಮೈದಾನ, ನವಲಗುಂದದ ಮಾಡೆಲ್ ಹೈಸ್ಕೂಲ್ ಮೈದಾನ ಹಾಗೂ ಕುಂದಗೋಳ, ಕಲಘಟಗಿಯಲ್ಲಿ ಗ್ಯಾರಂಟಿ ಸಮಾವೇಶ ನಡೆದಿತ್ತು.
ಫೆಬ್ರವರಿ 24ರಂದು ನವಲಗುಂದದಲ್ಲಿ ಸಿಎಂ ಭಾವಹಿಸಿದ್ದ ಸಮಾವೇಶದ ಲೆಕ್ಕಪತ್ರದಲ್ಲಿಯೇ ಏರುಪೇರಾಗಿದ್ದು, ಅನೇಕ ಸಂಶಯಗಳು ಬರುತ್ತಿವೆ ಎಂದು ನವಲಗುಂದದ ಸಾಮಾಜಿಕ ಹೋರಾಟಗಾರ ಮಾಬುಸಾಬ್ ಯರಗುಪ್ಪಿ ಆರೋಪಿಸಿದ್ದಾರೆ.
ಐದು ಸಮಾವೇಶಗಳ ಖರ್ಚು ವೆಚ್ಚದ ಬಗ್ಗೆ ಆರ್.ಟಿ.ಐ ಅಡಿಯಲ್ಲಿ ದಾಖಲೆಗಳನ್ನು ಪಡೆದುಕೊಂಡಿರುವ ಅವರು, ನವಲಗುಂದ ಸಮಾವೇಶ ಮುಗಿದ ಒಂದು ತಿಂಗಳ ಬಳಿಕ ಕೆಟರಿಂಗ್ ಕೊಟೇಶನ್ ಪಡೆದಿದ್ದಾರೆ. ಕುಂದಗೋಳದಲ್ಲಿ ನಡೆದಿದ್ದ ಸಮಾವೇಶದ ಊಟದ ಕೊಟೇಶನ್ನಲ್ಲಿ ಕೆಟರಿಂಗ್ ಗುತ್ತಿಗೆ ಪಡೆದವರ ಸಹಿಯೂ ಇಲ್ಲ.
ಅಲ್ಲದೇ ಸಮಾವೇಶ ನಡೆದ ದಿನಾಂಕ ಹಾಗೂ ಅದಕ್ಕಾಗಿ ಖರ್ಚು ಮಾಡಿದ ಅನೇಕ ಬಿಲ್ಗಳಲ್ಲಿ ನಮೂದಿಸಿರುವ ದಿನಾಂಕಕ್ಕೂ ತಾಳೆಯಾಗುತ್ತಿಲ್ಲ. ಎಲ್ಲ ಸಮಾವೇಶಗಳ ಉಪಹಾರದ ಟೆಂಡರ್ ಒಂದೇ ಏಜೆನ್ಸಿಗೆ ಕೊಟ್ಟಿದ್ದಾರೆ. ಒಂದು ಲಕ್ಷ ರೂಪಾಯಿ ಮೇಲಿನ ಮೊತ್ತವಿದ್ದರೂ ಟೆಂಡರ್ ಕರೆದಿಲ್ಲ. ಹೀಗಾಗಿ ಇಡೀ ಅನುದಾನ ಬಳಕೆ ಬಗ್ಗೆ ಅನುಮಾನಗಳು ಬರುತ್ತಿವೆ. ಈ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಿಸಿ ಮಾಬುಸಾಬ್, ಬೆಂಗಳೂರು ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದಾರೆ.
Laxmi News 24×7