ಬ್ಯಾಡಗಿ: ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಪಿಗಳು ಮಾತ್ರ ಪತ್ತೆಯಾಗುತ್ತಿಲ್ಲ. ಇದರಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದ್ದು, ಕಳ್ಳರನ್ನು ಪತ್ತೆ ಮಾಡುವಂತೆ ಪೊಲೀಸರನ್ನು ಒತ್ತಾಯಿಸುತ್ತಿದ್ದಾರೆ.
ಮನೆಗಳು ಹಾಗೂ ಇತರ ಸ್ಥಳಗಳಿಗೆ ನುಗ್ಗುತ್ತಿರುವ ಕಳ್ಳರು, ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ಕದ್ದೊಯ್ಯುತ್ತಿದ್ದಾರೆ.
ಕಳ್ಳತನದ ಬಗ್ಗೆ ಸಂತ್ರಸ್ತರು, ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಾರೆ. ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರಿಗೆ, ಆರೋಪಿಗಳ ಬಗ್ಗೆ ಇದುವರೆಗೂ ಸುಳಿವು ಲಭ್ಯವಾಗಿಲ್ಲ ಎಂದು ಜನರು ದೂರುತ್ತಿದ್ದಾರೆ.
ಕಳ್ಳತನದ ಭಯದಲ್ಲಿ ಹಲವು ಜನರು, ತಮ್ಮ ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇರಿಸುತ್ತಿದ್ದಾರೆ. ಕೆಲವರು, ತಮ್ಮ ಮನೆಗಳ ಮುಂದೆ ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಅಲಾರಾಂ ಅಳವಡಿಸಿಕೊಳ್ಳುತ್ತಿದ್ದಾರೆ.
ಪಟ್ಟಣದ ಸಂಗಮೇಶ್ವರ ನಗರದಲ್ಲಿ ವಾಸವಿರುವ ಮೃತ್ಯುಂಜಯ ಕೆರೂಡಿ, ತಿರಕಪ್ಪ ಬೆಳಕೇರಿ, ಕಾಕೋಳ ರಸ್ತೆಯ ಸೋಮೇಶ್ವರ ನಗರದ ಶಿವಯೋಗೆಪ್ಪ ಚಿನವಾಲ ಅವರ ಮನೆಯಲ್ಲಿ ಈಚೆಗೆ ಕಳ್ಳತನ ನಡೆದಿದೆ. ಎಲ್ಲರ ಮನೆಯಿಂದಲೂ ಕಳ್ಳರು, ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಹಾಗೂ ನಗದು ಕದ್ದುಕೊಂಡು ಹೋಗಿದ್ದಾರೆ. ಬೈಕ್, ತಂತಿಗಳು, ಗಂಧದ ಮರ ಸೇರಿದಂತೆ ಹಲವು ವಸ್ತುಗಳು ಕಳ್ಳತನವಾಗುತ್ತಿವೆ.
ಪ್ರತಿ ಬಾರಿ ಕಳ್ಳತನ ನಡೆದಾಗಲೂ ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಆದರೆ, ಕಳವು ಮಾಡಿದವರು ಯಾರು ? ಎಂಬುದನ್ನು ಮಾತ್ರ ಕಂಡುಹಿಡಿದಿಲ್ಲ ಎಂದು ಜನರು ದೂರುತ್ತಿದ್ದಾರೆ.