ವಿಜಯಪುರ: ರಾಜ್ಯ ಸರಕಾರ ಕಳೆದ 6 ತಿಂಗಳುಗಳ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ 14 ಜಿಲ್ಲಾಸ್ಪತ್ರೆಗಳಲ್ಲಿ ನೀಡುತ್ತಿದ್ದ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್ ಸೇವೆಯನ್ನು ಕೃಷ್ಣ ಡಯಾಗ್ನೊಸ್ಟಿಕ್ಸ್ ಲಿಮಿಟೆಡ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಮಹಾರಾಷ್ಟ್ರದ ಪುಣೆ ಮೂಲದ ಈ ಸಂಸ್ಥೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜತೆ 2017ರಲ್ಲಿ ಒಪ್ಪಂದ ಮಾಡಿಕೊಂಡಿತ್ತು.
ಉಡುಪಿ, ಕೋಲಾರ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಉತ್ತರಕನ್ನಡ, ಚಾಮರಾಜನಗರ, ಕೊಡಗು, ವಿಜಯಪುರ, ಧಾರವಾಡ, ಹಾವೇರಿ, ದಾವಣಗೆರೆ, ಯಾದಗಿರಿ ಹಾಗೂ ಬಾಗಲಕೋಟೆಯ ಜಿಲ್ಲಾಸ್ಪತ್ರೆಗಳಲ್ಲಿ ಸೇವೆ ಒದಗಿಸುತ್ತಿತ್ತು.
ಆರು ವರ್ಷಗಳಿಂದ 14 ಜಿಲ್ಲೆಗಳಲ್ಲಿ ಸಿಟಿ ಸ್ಕ್ಯಾನ್ ಹಾಗೂ 5 ಜಿಲ್ಲೆಗಳಲ್ಲಿ ಎಂಆರ್‌ಐ ಸ್ಕ್ಯಾನ್ ಮಾಡಲಾಗು ತ್ತಿತ್ತು. ಯಾವುದೇ ಯಂತ್ರ ಕೆಟ್ಟರೆ ಅಥವಾ ದುರಸ್ತಿಗೆ ಬಂದರೆ ಕಂಪೆನಿಯವರೇ ಬೇರೆಡೆ ರೋಗಿಗಳಿಗೆ ಸ್ಕ್ಯಾನಿಂಗ್ ಮಾಡಿಸುತ್ತಿದ್ದರು. ಇದರ ಹಣವನ್ನೂ ಅವರೇ ಭರಿಸುತ್ತಿದ್ದರು. ಆದರೆ ಆರು ತಿಂಗಳುಗಳಿಂದ ಹಣವನ್ನು ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಎಲ್ಲ 14 ಜಿಲ್ಲೆಗಳ ಸರ್ಜನ್‌ಗಳಿಗೆ ಸೆ. 22ರಂದೇ ಸಂಸ್ಥೆಯು ಪತ್ರ ಬರೆದು, ರಾಜ್ಯದ ರಾಷ್ಟ್ರೀಯ ಆರೋಗ್ಯ ಮಿಷನ್‌ನಿಂದ ಹಣ ಪಾವತಿಯಾಗದ ಕಾರಣ ಸೆ. 24ರಿಂದ ರೋಗಿಗಳಿಗೆ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದ್ದೇವೆ. ಬಾಕಿ ಹಣದ ವಿಷಯ ಇತ್ಯರ್ಥ ಆಗುವವರೆಗೂ ಸೇವೆಯನ್ನು ನೀಡುವುದಿಲ್ಲ. ಒಂದು ವೇಳೆ ಗಂಭೀರ ಪರಿಸ್ಥಿತಿಯ ಸಂದರ್ಭದಲ್ಲಿ ರೋಗಿ ನೇರವಾಗಿ ಹಣ ಪಾವತಿಸಿದರಷ್ಟೇ ಸೇವೆ ನೀಡುತ್ತೇವೆ ಎಂದು ತಿಳಿಸಿತ್ತು. ಈಗ ಸೇವೆಯನ್ನು ಸ್ಥಗಿತಗೊಳಿಸಿದ್ದು, ಕೆಲವೆಡೆ ರೋಗಿಗಳ ಅನುಕೂಲಕ್ಕಾಗಿ ಮಂಗಳವಾರ ತುರ್ತು ಸೇವೆಯನ್ನು ಮಾತ್ರ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಎಲ್ಲೆಲ್ಲಿ ಸ್ಥಗಿತ?
ಉಡುಪಿ, ಕೋಲಾರ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಉತ್ತರಕನ್ನಡ, ಚಾಮರಾಜನಗರ, ಕೊಡಗು, ವಿಜಯಪುರ, ಧಾರವಾಡ, ಹಾವೇರಿ, ದಾವಣಗೆರೆ, ಯಾದಗಿರಿ ಹಾಗೂ ಬಾಗಲಕೋಟೆ ಜಿಲ್ಲಾಸ್ಪತ್ರೆ
ಜಿಲ್ಲಾಸ್ಪತ್ರೆಯಲ್ಲಿ ಒಂದು ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್ ಯಂತ್ರವಿದೆ. ಸರಕಾರದ ಟೆಂಡರ್ ಪ್ರಕಾರ ಕೃಷ್ಣ ಡಯಾಗ್ನೊಸ್ಟಿಕ್ಸ್ ಲಿಮಿಟೆಡ್ ಮೂಲಕ ಸೇವೆ ನೀಡಲಾಗುತ್ತಿದೆ. ಮಂಗಳವಾರದಿಂದ ಸೇವೆ ಸ್ಥಗಿತಗೊಳಿಸಿದ್ದಾರೆ. ಜತೆಗೆ ಯಂತ್ರಗಳ ಸಮಸ್ಯೆಯೂ ಇದೆ.
-ಡಾ| ಶಿವಾನಂದ ಮಾಸ್ತಿಹೋಳಿ