ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ, ನಗರದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ವಕೀಲರ ಪರಿಷತ್ ಯಶಸ್ವಿಯಾಯಿತು. ವಕೀಲರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 15ರಂದು ಚರ್ಚೆಗೆ ಆಹ್ವಾನಿಸಿದರು.
ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ತು, ನ್ಯಾಯಪೀಠ- ಕೂಡಲಸಂಗಮ, ಜಿಲ್ಲಾ ವಕೀಲರ ಪರಿಷತ್ ಆಶ್ರಯದಲ್ಲಿ ರಾಜ್ಯದ ವಿವಿಧೆಡೆಯಿಂದ ಪಂಚಮಸಾಲಿ ಸಮಾಜದ ವಕೀಲರು ಸಮಾವೇಶಗೊಂಡರು.
ಇಡೀ ದಿನ ಚರ್ಚೆ ನಡೆಸಿದರು.
ಒಂದೇ ವಾರದಲ್ಲಿ ಭೇಟಿಯಾಗಲು ಮುಖ್ಯಮಂತ್ರಿ ಸಮಯ ನೀಡಬೇಕು, ಇಲ್ಲದಿದ್ದರೆ ಈ ಸ್ಥಳದಿಂದಲೇ ಉಗ್ರ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ವಕೀಲರು ಪಟ್ಟು ಹಿಡಿದರು. ಈ ಮಧ್ಯೆ ಸಮಾವೇಶದ ವೇದಿಕೆಗೆ ಬಂದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಮೀಸಲಾತಿ ವಿಚಾರವಾಗಿ ಚರ್ಚಿಸಲು ಮುಖ್ಯಮಂತ್ರಿ ಅವರು ಅಕ್ಟೋಬರ್ 15ರಂದು ಸಮಯ ನೀಡಿದ್ದಾರೆ’ ಎಂದು ತಿಳಿಸಿದರು.
ಇದಕ್ಕೆ ಒಪ್ಪದ ವಕೀಲರು ಗದ್ದಲ ಆರಂಭಿಸಿದರು. ಸ್ವತಃ ಸಿದ್ದರಾಮಯ್ಯ ಅವರೇ ಸ್ವಾಮೀಜಿ ಅವರಿಗೆ ಫೋನ್ ಮಾಡಿ ತಿಳಿಸಬೇಕು ಎಂದು ಪಟ್ಟು ಹಿಡಿದರು. ಸ್ಥಳದಲ್ಲಿದ್ದ ಶಾಸಕ ವಿನಯ ಕುಲಕರ್ಣಿ ಅವರು ಸಿದ್ದರಾಮಯ್ಯ ಅವರಿಗೆ ಮೊಬೈಲ್ ಕರೆ ಮಾಡಿ ಶ್ರೀಗಳ ಕೈಗೆ ಕೊಟ್ಟರು.
‘ಈಗ ದಸರಾ ಹಬ್ಬವಿದೆ. ಮುಗಿದ ಬಳಿಕ ಎಲ್ಲರೂ ಕುಳಿತು ಮಾತನಾಡೋಣ. ಹೋರಾಟ ಮುಂದುವರಿಸಬೇಡಿ’ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.