Breaking News

ಎಮ್ಮೆಗಳಿಗೂ ಇಲ್ಲೊಂದು ಬ್ಯೂಟಿ ಪಾರ್ಲರ್‌ ಇದೆ

Spread the love

ಲ್ಲೊಂದು ಬ್ಯೂಟಿ ಪಾರ್ಲರ್‌ ಇದೆ. ಒಳಗೆ ಹೋದ ತಕ್ಷಣ ಘಮಘಮ ಎನ್ನುವ ಸೋಪು ಹಾಕಿ ಸ್ನಾನ ಮಾಡಿಸುತ್ತಾರೆ. ಅನಗತ್ಯ ಮೈಗೂದಲು ತೆಗೆಯುತ್ತಾರೆ. ಮೈತುಂಬ ಎಣ್ಣೆ ಹಚ್ಚಿ ಮಾಲೀಶ್‌ ಮಾಡುತ್ತಾರೆ. ಕಾಲುಗಳಿಗೆ ಗೆಜ್ಜೆ ಕಟ್ಟಿ, ಕಿವಿಯೋಲೆ ಹಾಕಿ ಅಲಂಕಾರ ಮಾಡುತ್ತಾರೆ.

ಇಷ್ಟಾದ ಮೇಲೆ ವಯ್ಯಾರಿ ಬಿಂಕ ಬಿನ್ನಾಣದಿಂದ ಹೊರಬರುತ್ತಾಳೆ.

ಅರೆರೇ! ಇದೇನು ಮದುವಣಿಗಿತ್ತಿಯನ್ನು ತಯಾರು ಮಾಡುತ್ತಿದ್ದಾರೆಯೇ ಎಂದು ಕೇಳಬೇಡಿ. ಇಲ್ಲಿ ಸುಂದರಿಯಂತೆ ಅಲಂಕಾರಗೊಳ್ಳುತ್ತಿರುವುದು ಎಮ್ಮೆ! ಹೌದು, ಇದು ಎಮ್ಮೆಗಳ ಪಾರ್ಲರ್‌..!

ಮಹಾರಾಷ್ಟ್ರದ ಕೊಲ್ಹಾಪುರದ ವಿಜಯ ಸೂರ್ಯವಂಶಿ ಇಂಥ ವಿಶಿಷ್ಟ, ವಿನೂತನ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಕೊಲ್ಹಾಪುರ ಮಹಾನಗರ ಪಾಲಿಕೆ ಸದಸ್ಯರೂ ಆಗಿರುವ ಅವರು, ಪಾಲಿಕೆ ಅನುದಾನದಲ್ಲೇ ಈ ಪಾರ್ಲರ್‌ ತೆರೆದಿದ್ದಾರೆ.

ಪಾರ್ಲರ್‌ ಒಳಗೆ ಬಂದರೆ ಸಾಕು, ಎಮ್ಮೆಗಳಿಗೆ ಉಚಿತವಾಗಿ ಅಲಂಕಾರ ಮಾಡಿಸಿಕೊಂಡು ‘ಯಾರೇ ಕೂಗಾಡಲಿ, ಊರೇ ಹೋರಾಡಲಿ, ಎಮ್ಮೆ ನಿನಗೆ ಸಾಟಿ ಇಲ್ಲ, ನಿನ್ನ ನೆಮ್ಮದಿಗೆ ಭಂಗವಿಲ್ಲ…’ ಎಂದು ಹಾಡುತ್ತ ಹೋಗಬಹುದು.

ಹೇಳಿ ಕೇಳಿ ಕೊಲ್ಹಾಪುರ ಗೌಳಿಗರ ಊರು. ಇಡೀ ನಗರದಲ್ಲಿ ಎಲ್ಲಿ ನೋಡಿದರೂ ಎಮ್ಮೆಗಳ ಹಿಂಡೇ ಕಾಣಿಸುತ್ತದೆ. ಇಲ್ಲಿ ಉದ್ಯೋಗಿ, ವ್ಯಾಪಾರಿಗಳಂತೆ ಗೌಳಿಗರ ಸಂಖ್ಯೆಯೂ ದೊಡ್ಡದಿದೆ. ಎಮ್ಮೆಗಳು ಮೈ ಗಲೀಜು ಮಾಡಿಕೊಂಡಾಗ ನದಿ, ಕೆರೆ-ಕಟ್ಟೆಗಳಲ್ಲಿ ಅವುಗಳ ಮೈತೊಳೆದು ಸ್ವಚ್ಛ ಮಾಡಲಾಗುತ್ತಿತ್ತು. ಇದರಿಂದ ಜೀವಜಲ ಕಲುಷಿತವಾಗುತ್ತಿತ್ತು. ಈ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಳ್ಳಬೇಕು. ಎಮ್ಮೆಗಳನ್ನು ನೋಡಿ ಯಾರೂ ಅಸಹ್ಯಪಟ್ಟುಕೊಳ್ಳದಂತೆ ಏನಾದರೂ ಮಾಡಬೇಕು ಎಂಬ ಆಲೋಚನೆ ವಿಜಯ ಅವರಲ್ಲಿ ಬಂದಿತು. ಅದರ ಪ್ರತಿಫಲವೇ ಈ ಪಾರ್ಲರ್‌.

‘ಎಮ್ಮೆಗಳಿಗೂ ಪಾರ್ಲರ್‌ ತೆಗೆದಿದ್ದಾರಾ?’, ‘ಒಂದು ದೊಡ್ಡ ಕಟ್ಟೆಕಟ್ಟಿ, ಪ್ರತಿದಿನ ಎಮ್ಮೆಗಳಿಗೆ ಮೈತೊಳೆದರೆ, ಕೂದಲು ಕತ್ತರಿಸಿದರೆ ಅದಕ್ಕೆ ಪಾರ್ಲರ್‌ ಅಂತಾರೆಯೇ’… ಹೀಗೆ ನಾನಾ ರೀತಿಯಲ್ಲಿ ಜನರು ಗೇಲಿ ಮಾಡಿದ್ದುಂಟು. ಆದರೆ, ಇಂಥ ವ್ಯಂಗ್ಯದ ಮಾತುಗಳಿಗೆ ಕಿವಿಗೊಡದ ವಿಜಯ, ಇಂಥದ್ದೊಂದು ವಿಶಿಷ್ಟ ಯೋಜನೆ ಕಾರ್ಯಗತಗೊಳಿಸಿದ್ದಾರೆ.

ತಮ್ಮ ವಾರ್ಡಿಗೆ ಬಂದ ₹14.95 ಲಕ್ಷ ವಿಶೇಷ ಅನುದಾನದಲ್ಲಿ ವಿಜಯ ಅವರು ಎಮ್ಮೆಗಳ ಪಾರ್ಲರ್‌ ತೆರೆದಿದ್ದಾರೆ. 2019ರಲ್ಲಿ ಆರಂಭಗೊಂಡ ಈ ಪಾರ್ಲರ್‌, ವರ್ಷದಿಂದ ವರ್ಷಕ್ಕೆ ‘ಎಮ್ಮೆಪ್ರಿಯ’ವಾಗುತ್ತಲೇ ಇದೆ. ಈಗಂತೂ ಪ್ರತಿದಿನ ಇಲ್ಲಿ ಎಮ್ಮೆಗಳು ಸಾಲುಗಟ್ಟಿ ನಿಲ್ಲುತ್ತಿವೆ. ಪಾಲಿಕೆ ಸದಸ್ಯರೊಬ್ಬರ ವಿಭಿನ್ನ ಆಲೋಚನೆ ಗೌಳಿ ಸಮುದಾಯಕ್ಕೆ ವರವಾಗಿದೆ. ಚುಚ್ಚುಮದ್ದು ಹಾಕಲು, ಔಷಧೋಪಚಾರ ಮಾಡಲು, ಚಿಕಿತ್ಸೆಗೆ ಕೂಡ ಈ ಪಾರ್ಲರ್‌ ಬಳಕೆಯಾಗುತ್ತಿದೆ.

‘ನಾನು ಹದಿನೈದು ಎಮ್ಮೆಗಳನ್ನು ಸಾಕಿದ್ದೇನೆ. ಅವು ಆಗಾಗ ಅನಾರೋಗ್ಯಕ್ಕೆ ಈಡಾಗುತ್ತಿದ್ದವು. ಪಾರ್ಲರ್‌ನಲ್ಲಿ ಮೈ ತೊಳೆಯಿಸಿ, ವಾರಕ್ಕೊಮ್ಮೆ ಎಣ್ಣೆಯಿಂದ ಮಾಲೀಶ್‌ ಮಾಡಿಸುತ್ತೇನೆ. ಈಗ ಅವುಗಳ ಆರೋಗ್ಯ ಚೆನ್ನಾಗಿದೆ. ಹೆಚ್ಚು ಹಾಲು ಕೊಡುತ್ತಿವೆ. ಪಾರ್ಲರ್‌ನಿಂದ ಹೊರಬಂದ ಎಮ್ಮೆಗಳು ಲಕಲಕ ಅಂಥ ಲಕ್ಷಣವಾಗಿ ಕಾಣುತ್ತವೆ. ಅದನ್ನು ನೋಡುವುದೇ ಖುಷಿ’ ಎಂದರು ಮನೋಜ್‌ ಮಾಳಿ.

ಮಂಗೇಶಕರ್‌ ನಗರದಿಂದ ಎರಡು ಕಿಲೊಮೀಟರ್‌ ದೂರದಲ್ಲಿ ಕೋಟಿತೀರ್ಥ ಕೆರೆ ಇದೆ. ಮೊದಲು ಅಲ್ಲಿ ಮೈ ತೊಳೆಯುತ್ತಿದ್ದರು. ಸಂಚಾರ ದಟ್ಟಣೆಯಿಂದ ಎಮ್ಮೆಗಳನ್ನು ಸಂಬಾಳಿಸುವುದು ಸವಾಲಾಗಿತ್ತು. ವಾಹನ ಸವಾರರಿಗೂ ಕಿರಿಕಿರಿ ಆಗುತ್ತಿತ್ತು. ಅಲ್ಲದೇ ಕೆರೆ ನೀರು ಕಲುಷಿತಗೊಂಡಿತ್ತು. ಅದೇ ನೀರಿನಲ್ಲಿ ಪದೇಪದೇ ಮೈ ತೊಳೆಯುವುದರಿಂದ ಎಮ್ಮೆಗಳು ಮತ್ತು ಗೌಳಿಗರ ಆರೋಗ್ಯ ಹದಗೆಡುತ್ತಿತ್ತು. ಪಾರ್ಲರ್‌ನಿಂದ ಈ ಸಮಸ್ಯೆ ತಪ್ಪಿದೆ ಎಂದು ಗೌಳಿಗರು ಖುಷಿಯಿಂದ ಹೇಳಿದರು.


Spread the love

About Laxminews 24x7

Check Also

ಚನ್ನಮ್ಮನ ಹೋರಾಟ ನಮಗೆ ಆದರ್ಶವಾಗಲಿ: ಸಚಿವ ಸತೀಶ ಜಾರಕಿಹೊಳಿ

Spread the love ಕಿತ್ತೂರು ಉತ್ಸವ-2025: ಚನ್ನಮ್ಮನ ಸಾಹಸಗಾಥೆಯ ಅನಾವರಣ ಚನ್ನಮ್ಮನ ಹೋರಾಟ ನಮಗೆ ಆದರ್ಶವಾಗಲಿ: ಸಚಿವ ಸತೀಶ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ