ಹಾವೇರಿ: ಮಳೆ ಬಂದರೆ ಸೋರುವ ಕಟ್ಟಡ, ಆವರಣದಲ್ಲಿ ಹೆಚ್ಚಾಗಿರುವ ಕಸ-ಕಂಟಿ, ತುರ್ತು ಪರಿಸ್ಥಿತಿಯಲ್ಲಿ ಲಭ್ಯವಾಗದ ಚಿಕಿತ್ಸೆ, ನೀರಿನ ಸೌಲಭ್ಯ ಹಾಗೂ ವಿದ್ಯುತ್ ಸಂಪರ್ಕವಿಲ್ಲದೇ ದಿನದೂಡುತ್ತಿರುವ ಸಿಬ್ಬಂದಿ, ಅರ್ಧಕ್ಕೆ ನಿಂತ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ…
ಜಿಲ್ಲೆಯ ಸವಣೂರು ತಾಲ್ಲೂಕಿನ ಹುರುಳಿಕುಪ್ಪಿ ಗ್ರಾಮದಲ್ಲಿರುವ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಕೇಂದ್ರದ ದುಸ್ಥಿತಿ ಇದು. ಮೂಲಸೌಕರ್ಯಗಳ ಕೊರತೆಯಿಂದಾಗಿ ಕೇಂದ್ರ ಸೊರಗುತ್ತಿದೆ. ಗ್ರಾಮಸ್ಥರ ಹೋರಾಟದ ಫಲವಾಗಿ ಉದ್ಘಾಟನೆಗೊಂಡಿದ್ದ ಕೇಂದ್ರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗದಿದ್ದರಿಂದ, ಹುರುಳಿಕುಪ್ಪಿ ಹಾಗೂ ಸುತ್ತಲಿನ ಗ್ರಾಮದ ಜನರು ಪರದಾಡುತ್ತಿದ್ದಾರೆ.
ಗ್ರಾಮದ ಹೊರವಲಯದಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಕೇಂದ್ರ ಸ್ಥಾಪಿಸಿ, 2018ರಲ್ಲಿ ಉದ್ಘಾಟನೆ ಮಾಡಲಾಗಿದೆ. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರುದ್ರಪ್ಪ ಲಮಾಣಿ ಅವರು ಉದ್ಘಾಟನೆ ನೆರವೇರಿಸಿದ್ದರು. ಇದಾದ ನಂತರ, ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಆದರೆ, ಕೇಂದ್ರ ಮಾತ್ರ ಬದಲಾಗಿಲ್ಲ.
ಕೇಂದ್ರವಿರುವ ಕಟ್ಟಡ, ಮಳೆಗಾಲದಲ್ಲಿ ಸೋರುತ್ತಿದೆ. ಕಟ್ಟಡದಲ್ಲಿ ನೀರಿನ ಸೌಲಭ್ಯ ಇಲ್ಲದಿದ್ದರಿಂದ, ಶೌಚಾಲಯ ಬಳಕೆ ಸಂಪೂರ್ಣ ಬಂದ್ ಆಗಿದೆ. ವಿದ್ಯುತ್ ಸಂಪರ್ಕವೂ ಇಲ್ಲದಿದ್ದರಿಂದ, ಸೂರ್ಯನ ಬೆಳಕಿನಲ್ಲಷ್ಟೇ ಕೇಂದ್ರದ ಕೆಲಸಗಳನ್ನು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಟ್ಟಡದ ಹಲವೆಡೆ ಬಿರುಕು ಬಿಟ್ಟಿದೆ. ಕಳಪೆ ಕಾಮಗಾರಿ ಮಾಡಿರುವ ಆರೋಪವೂ ಇದೆ.
ವೈದ್ಯ, ಸ್ಟಾಫ್ ನರ್ಸ್ ಹಾಗೂ ಡಿ ಗ್ರೂಪ್ ದರ್ಜೆ ಸಿಬ್ಬಂದಿ ಮಾತ್ರ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹುರುಳಿಕುಪ್ಪಿಯಲ್ಲಿ ಸುಮಾರು 6 ಸಾವಿರ ಜನಸಂಖ್ಯೆ ಇದೆ. ಇಲ್ಲಿಯ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗುತ್ತಿಲ್ಲ. ತುರ್ತು ಪರಿಸ್ಥಿತಿ ಹಾಗೂ ಯಾವುದಾದರೂ ಆರೋಗ್ಯ ಸಮಸ್ಯೆ ಎದುರಾದರೆ ಪಕ್ಕದ ಊರುಗಳಿಗೆ ಹಾಗೂ ಸವಣೂರಿನಲ್ಲಿರುವ ತಾಲ್ಲೂಕು ಆಸ್ಪತ್ರೆಗೆ ಹೋಗುತ್ತಿದ್ದಾರೆ