ಬಾಗಲಕೋಟೆ: ಹಿಂದಿನ ಸಿಎಂ ಬೊಮ್ಮಾಯಿ ಅವರಿಗೆ ಪಂಚಮಸಾಲಿ ಸಮಾಜದ ಬಗ್ಗೆ ಗೌರವ ಮತ್ತು ಭಯ ಇತ್ತು. ಆದರೆ ಈಗಿನ ಸಿಎಂ ಸಿದ್ದರಾಮಯ್ಯ ಅವರಿಗೆ ನಮ್ಮ ಭಯ ಇಲ್ಲ. ಬದಲಿಗೆ ಇವರನ್ನು ಕಂಡರೆ ನಾವು ಭಯ ಪಡುವಂತಂತಾಗಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸುತ್ತಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು. ಈಗಲ್ಲದಿದ್ದರೂ ಇನ್ನೂ ಐದು, ಹತ್ತು ವರ್ಷಕ್ಕಾದರೂ ರಾಜ್ಯಕ್ಕೆ ಒಬ್ಬ ಒಳ್ಳೆಯ ಮುಖ್ಯಮಂತ್ರಿಗಳನ್ನು ದೇವರು ಕೊಟ್ಟೆ ಕೊಡುತ್ತಾನೆ. ಆಗ ನಮ್ಮ ಮೀಸಲಾತಿಗೆ ಸ್ಪಂದಿಸುವ ಸಿಎಂ ಬರುತ್ತಾರೆ. ಹಾಗೆಂದು ಈಗ ನಿರಾಸೆಯಾಗಿ ಕುಳಿತರೆ ಹೋರಾಟ ನಿಂತು ಬಿಡುತ್ತದೆ ಎಂದರು.
ಹಿಂದೆ ಬಸವರಾಜ್ ಬೊಮ್ಮಾಯಿ ಸಿಎಂ ಇದ್ದಾಗ ಆವತ್ತಿನ ಪರಿಸ್ಥಿತಿ ಬೇರೆ ಇತ್ತು. ಹೀಗಾಗಿ ನಾವು ಬೊಮ್ಮಾಯಿ ಅವರನ್ನು ಎಲ್ಲಿಗೆ ಕರೆದರು ಬಂದು ಮಾತನಾಡುತ್ತಿದ್ದರು. ಈಗ ನಾನು ಸಿಎಂ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಬಂದಿದೆ. ಅದು ಅನಿವಾರ್ಯ, ಏನೂ ಮಾಡೋಕೆ ಬರುವುದಿಲ್ಲ. ನಾವು ಹೋರಾಟದಲ್ಲಿ ಇರುವುದರಿಂದ ಎಷ್ಟೇ ಕಷ್ಟ ಆದರೂ ಹೋರಾಟ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.