ಹೊಸಪೇಟೆ (ವಿಜಯನಗರ): ರೈತರಿಗೆ ಕತ್ತೆ ನೀಡಿ ಅವರಿಂದ ಹಾಲು ಖರೀದಿಸುವ ವ್ಯವಹಾರ ನಡೆಸುತ್ತಿದ್ದ ‘ಜೆನ್ನಿ ಮಿಲ್ಕ್’ ಕಂಪನಿ ವಿರುದ್ಧ 60ಕ್ಕೂ ಅಧಿಕ ಮಂದಿ ಇಲ್ಲಿನ ನಗರ ಠಾಣೆಯಲ್ಲಿ ದೂರು ನೀಡಿದ್ದು, ಇನ್ನೂ ಹಲವರು ರಾಜ್ಯದ ಬೇರೆ ಬೇರೆ ಕಡೆಗಳಿಂದ ಇಲ್ಲಿಗೆ ಬಂದು ದೂರು ನೀಡುತ್ತಿದ್ದಾರೆ.
ಮುಖ್ಯ ಆರೋಪಿಯೂ ಆಗಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನೂತಲಪತಿ ಮುರಳಿ ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
‘ರಾಜ್ಯದ ವಿವಿಧೆಡೆ 100ರಿಂದ 120 ಮಂದಿ ಮೋಸ ಹೋಗಿರುವ ಶಂಕೆ ಇದೆ. ಒಟ್ಟಾರೆ 300 ಮಂದಿ ಈ ವ್ಯವಹಾರದಲ್ಲಿ ಹಣ ತೊಡಗಿಸಿರುವ ಮಾಹಿತಿ ಇದೆ. ಇನ್ಸ್‌ಪೆಕ್ಟರ್ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಮುರಳಿ ಅವರು ವಿದೇಶಕ್ಕೆ ಹೋಗಿದ್ದಾರೆ ಎಂಬ ವದಂತಿ ಇದ್ದರೂ ಅದರ ಸತ್ಯಾಸತ್ಯತೆ ತಿಳಿಯಬೇಕಿದೆ. ವಿಮಾನನಿಲ್ದಾಣಗಳೂ ಸೇರಿದಂತೆ ಎಲ್ಲೆಡೆ ಮುರಳಿ, ಮ್ಯಾನೇಜರ್ ಶಂಕರ್ ರೆಡ್ಡಿ ಮತ್ತು ಇತರ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್.ತಿಳಿಸಿದ್ದಾರೆ.
‘ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ನಗರ ಠಾಣೆಯಲ್ಲಿ ಹೊಸಪೇಟೆಯ ಮಲ್ಲೇಶಪ್ಪ ಎಂಬುವವರು ಕಂಪನಿಯ ವಿರುದ್ಧ ದೂರು ನೀಡಿದರು. ಅದರ ಆಧಾರದಲ್ಲಿ ಕಂಪನಿಯ ಎಂ.ಡಿ, ಮ್ಯಾನೇಜರ್ ಮತ್ತು ಇತರ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹೊಸಪೇಟೆ ಸುತ್ತಮುತ್ತ ಮತ್ತು ರಾಜ್ಯದ ಏಳಕ್ಕೂ ಅಧಿಕ ಜಿಲ್ಲೆಗಳಿಂದ ಜನರು ಠಾಣೆಗೆ ಬಂದಿದ್ದು, ಈಗಾಗಲೇ 60ಕ್ಕೂ ಅಧಿಕ ಜನರಿಂದ ದೂರು ಸ್ವೀಕರಿಸಲಾಗಿದೆ. ಎರಡು ಪ್ರತ್ಯೇಕ ಕೌಂಟರ್‌ಗಳನ್ನು ತೆರೆದು ದೂರು ಸ್ವೀಕರಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.
ಮೋಸ ಹೋಗಿರುವ ಕುರಿತು ಇನ್ನಷ್ಟು ಜನರು ದೂರು ನೀಡಲು ಬರುತ್ತಿದ್ದಾರೆ. ಹೆಚ್ಚಿನ ತನಿಖೆ ಅಗತ್ಯವಿರುವುದರಿಂದ ಮತ್ತೊಂದು ವಿಶೇಷ ತಂಡ ರಚಿಸಲಾಗುವುದು ಎಂದು ಅವರು ಹೇಳಿದರು.