ಅಮರಾವತಿ: ಕೋಟ್ಯಂತರ ಹಿಂದುಗಳ ಪವಿತ್ರ ಕ್ಷೇತ್ರ ತಿರುಪತಿಯ ತಿರುಮಲ ದೇಗುಲದ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಹಾಗೂ ಪ್ರಾಣಿಗಳ ಕೊಬ್ಬು ಬಳಕೆ ಆಗುತ್ತಿತ್ತೆಂಬ ವಿಚಾರ ಬೆಳಕಿಗೆ ಬಂದಿದೆ. ಈ ಹಿಂದಿನ ಸಿಎಂ ಜಗನ್ ಮೋಹನ್ ರೆಡ್ಡಿ ಅವಧಿಯಲ್ಲಿ ನಡೆದಿತ್ತೆನ್ನಲಾದ ಈ ಪ್ರಮಾದವನ್ನು ಸತ್ಯ ಎಂದು ಗುಜರಾತ್ನ ಪ್ರಯೋಗಾಲಯ ದೃಢಪಡಿಸಿದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ.
ವೈಎಸ್ಆರ್ಸಿಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ತಿರುಮಲ ತಿರುಪತಿ ಶ್ರೀವೆಂಕಟೇಶ್ವರ ದೇವಸ್ಥಾನದ ಪ್ರಸಾದದ ಲಡ್ಡುಗಳ ತಯಾರಿಕೆಗೆ ಶುದ್ಧ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು. ಆ ಮೂಲಕ ದೇವಸ್ಥಾನದ ಪವಿತ್ರ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಲಾಗಿತ್ತೆಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕಿಡಿಕಾರಿದ್ದಾರೆ. ಮಂಗಳಗಿರಿಯಲ್ಲಿ ನಡೆದ ಎನ್ಡಿಎ ಮೈತ್ರಿಕೂಟದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ನಾಯ್ಡು, ಪ್ರಸಾದ ಅಪವಿತ್ರಗೊಳಿಸಿದ ಬಗ್ಗೆ ಹಲವಾರು ಬಾರಿ ದೂರು ನೀಡಲಾಗಿದ್ದರೂ ಕ್ರಮ ಜರುಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಜೂನ್ನಲ್ಲೇ ಕಪ್ಪುಪಟ್ಟಿಗೆ: ತಿರುಪತಿ ಲಡ್ಡು ಪ್ರಸಾದಕ್ಕೆ ತುಪ್ಪ ಸರಬರಾಜು ಮಾಡುತ್ತಿದ್ದ ಐದು ಏಜೆನ್ಸಿಗಳ ತುಪ್ಪದ ಗುಣಮಟ್ಟವನ್ನು 2024ರ ಜೂನ್ನಲ್ಲೇ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಪರಿಶೀಲಿಸಿತ್ತು. ಈ ವೇಳೆ ಒಂದು ಏಜೆನ್ಸಿಯ ಗುಣಮಟ್ಟ ಕಳಪೆಯಾಗಿದ್ದರಿಂದ ಅದನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು.
ಸಿಬಿಐ ತನಿಖೆಗೆ ಒತ್ತಾಯ: ತೆಲುಗುದೇಶಂ ಮತ್ತು ವೈಎಸ್ಆರ್ಪಿ ತಿರುಪತಿ ಲಡ್ಡು ವಿಚಾರದಲ್ಲಿ ತುಚ್ಛ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿವೆ. ಇದರಿಂದ ತಿರುಪತಿಯ ಕೋಟ್ಯಂತರ ಭಕ್ತರ ಭಾವನೆಗೆ ಘಾಸಿಯಾಗಿದೆ. ಹಾಗಾಗಿ ಆಂಧ್ರ ಸರ್ಕಾರ ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷೆ ವೈಎಸ್ ಶರ್ವಿುಳಾ ಆಗ್ರಹಿಸಿದ್ದಾರೆ.
ಕೆಎಂಎಫ್ ಸ್ಪಷ್ಟನೆ: ತಿರುಪತಿ ಲಡ್ಡು ಪ್ರಸಾದ ತಯಾರಿಗೆ ಕಳೆದ ನಾಲ್ಕು ವರ್ಷಗಳಿಂದ ಟಿಟಿಡಿ ಮಂಡಳಿ ನಮ್ಮ ಸಂಸ್ಥೆಯಿಂದ ತುಪ್ಪ ಖರೀದಿ ಮಾಡಿಲ್ಲ. ಆಂಧ್ರದಲ್ಲಿ ಇತ್ತೀಚೆಗೆ ತೆಲುಗುದೇಶಂ ಪಕ್ಷ (ಟಿಡಿಪಿ) ಅಧಿಕಾರಕ್ಕೆ ಬಂದ ನಂತರವಷ್ಟೇ ನಾವು ಮತ್ತೆ ತುಪ್ಪ ಸರಬರಾಜು ಮಾಡುತ್ತಿದ್ದೇವೆ ಎಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಸ್ಪಷ್ಟನೆ ನೀಡಿದೆ.
ಲಡ್ಡು ಪ್ರಸಾದಕ್ಕೆ ಏನೆಲ್ಲ ಬಳಕೆ?: ಕಡಲೆ ಹಿಟ್ಟು, ಗೋಡಂಬ ಏಲಕ್ಕಿ, ತುಪ್ಪ, ಸಕ್ಕರೆ, ಕಲ್ಲು ಸಕ್ಕರೆ, ಒಣದ್ರಾಕ್ಷಿ ಬಳಸಲಾಗುತ್ತದೆ. ಕರ್ಪರ ಬಳಕೆ ಕೈಬಿಡಲಾಗಿದೆ. ಪ್ರತೀ ದಿನ ಕನಿಷ್ಠ 400-500 ಕೆಜಿ ತುಪ್ಪ, 750 ಕೆಜಿ ಗೋಡಂಬಿ, 500 ಕೆಜಿ ಒಣದ್ರಾಕ್ಷಿ ಮತ್ತು 200 ಕೆಜಿ ಏಲಕ್ಕಿ ಮತ್ತಿತರ ಪದಾರ್ಥ ಬಳಸಿ ಲಡ್ಡು ತಯಾರಿಸಲಾಗುತ್ತದೆ. ಪ್ರಸಾದ ತಯಾರಿಕೆ ಸಲುವಾಗಿ ಟಿಟಿಡಿ ಆರು ತಿಂಗಳಿಗೊಮ್ಮೆ ಟೆಂಡರ್ ಮೂಲಕ ತುಪ್ಪ ಖರೀದಿ ಮಾಡುತ್ತದೆ. ಈ ರೀತಿ ವರ್ಷಕ್ಕೆ 5 ಲಕ್ಷ ಕೆಜಿ ತುಪ್ಪ ಖರೀದಿಸಲಾಗುತ್ತದೆ. ತುಪ್ಪ ಖರೀದಿಗೆ ಗುಣಮಟ್ಟದ ನಿರ್ದಿಷ್ಟ ಮಾನದಂಡ ನಿಗದಿ ಪಡಿಸಲಾಗಿರುತ್ತದೆ. 2022 ಜುಲೈನಿಂದ 2023 ಜುಲೈ ಅವಧಿಯಲ್ಲಿ ಟಿಟಿಡಿ ಬೇರೆಬೇರೆ ಸರಬರಾಜುದಾರರ ಸುಮಾರು 42 ಟ್ರಕ್ ಲೋಡ್ ತುಪ್ಪವನ್ನು ಕಳಪೆ ಎಂದು ತಿರಸ್ಕರಿಸಿತ್ತು. ಗುಜರಾತ್ನ ಅಮುಲ್ ಹೆಚ್ಚಿನ ಪ್ರಮಾಣದ ತುಪ್ಪ ಸರಬರಾಜು ಮಾಡುತ್ತದೆ. ಕೆಎಂಎಫ್ನ ನಂದಿನಿ ತುಪ್ಪವನ್ನು ಹಿಂದಿನ ವೈಎಸ್ಆರ್ಸಿಪಿ ಸರ್ಕಾರ ನಾಲ್ಕು ವರ್ಷಗಳಿಂದ ಖರೀದಿ ಮಾಡುತ್ತಿರಲಿಲ್ಲ.
ಆಣೆ, ಪ್ರಮಾಣದ ಸವಾಲು: ಚಂದ್ರಬಾಬು ನಾಯ್ಡು ಹೇಳಿಕೆ ಅತ್ಯಂತ ದುಷ್ಟತನದ್ದಾಗಿದೆ. ಭಕ್ತರ ನಂಬಿಕೆಯನ್ನು ಸದೃಢಗೊಳಿಸಲು ದೇವರ ಸಾಕ್ಷಿಯಾಗಿ ನಾನು ಕುಟುಂಬದವರೊಂದಿಗೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ, ನಾಯ್ಡು ಕೂಡ ಕುಟುಂಬಸ್ಥರ ಜೊತೆ ಪ್ರಮಾಣ ಮಾಡುತ್ತಾರೆಯೇ? ಎಂದು ಜಗನ್ ಆಪ್ತ ವೈ.ವಿ. ಸುಬ್ಬಾರೆಡ್ಡಿ ಸವಾಲು ಹಾಕಿದ್ದಾರೆ.
* ಪ್ರಸಾದ ತಯಾರಿ ಕೇಂದ್ರ ಕೊಳಕುಮಯ
* ಜನರಿಗೆ ನೀಡುವ ಪ್ರಸಾದ ಅಶುದ್ಧವಾಗಿತ್ತು
* ದೇವರಿಗೆ ಅರ್ಪಿಸುವ ಪ್ರಸಾದವೂ ಅಶುದ್ಧ
* ಕಲಬೆರಕೆ ಪದಾರ್ಥ ನಿತ್ಯ ಬಳಕೆ ಆಗುತ್ತಿತ್ತು
* ಶುದ್ಧ ತುಪ್ಪದ ಬದಲು ಪ್ರಾಣಿ ಕೊಬ್ಬು ಬಳಕೆ
ತಿರುಪತಿ ಲಡ್ಡು ಪ್ರಸಾದದಲ್ಲಿ ಈ ಹಿಂದಿನ ಸರ್ಕಾರ ಕೊಬ್ಬನ್ನು ಸೇರಿಸಿತ್ತು ಎಂದು ಆಂಧ್ರ ಸಿಎಂ ಮಾಡಿರುವ ವಿಚಾರದಲ್ಲಿ ಸತ್ಯವಿದ್ದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು, ಈ ಕುರಿತು ತನಿಖೆ ನಡೆಸಬೇಕು
ಸಿ.ಟಿ. ರವಿ, ವಿಧಾನಪರಿಷತ್ ಸದಸ್ಯ
2019ರಿಂದ 2024ರವರೆಗೆ ತಿರುಪತಿಗೆ ಕೆಎಂಎಫ್ನಿಂದ ನಂದಿನಿ ತುಪ್ಪ ಸರಬರಾಜು ಮಾಡಿಲ್ಲ. ನಮ್ಮ ಪೂರೈಕೆ ಇಲ್ಲದ ವೇಳೆ ಕಲಬೆರಕೆ ಆಗಿರಬಹುದು. ಕಳೆದ ಬಾರಿ ನಾವು ಅಲ್ಲಿಗೆ ಹೋಗಿದ್ದಾಗ ಲಡ್ಡುದಲ್ಲಿ ತುಪ್ಪದ ಘಮ ಇರಲಿಲ್ಲ.
| ಭೀಮಾ ನಾಯ್ಕ್, ಕೆಎಂಎಫ್ ಅಧ್ಯಕ್ಷ
ಸಿ.ಟಿ. ರವಿ, ವಿಧಾನಪರಿಷತ್ ಸದಸ್ಯ
| ಭೀಮಾ ನಾಯ್ಕ್, ಕೆಎಂಎಫ್ ಅಧ್ಯಕ್ಷ
ನಾವು ಸ್ವಚ್ಛತೆ, ಶುದ್ಧತೆಗೆ ಆದ್ಯತೆ ನೀಡಿದ್ದೇವೆ. ಲಡ್ಡು ತಯಾರಿಕೆಗೆ ಶುದ್ಧ ತುಪ್ಪಕ್ಕೆ ಆರ್ಡರ್ ಮಾಡಿದ್ದೇವೆ. ಶ್ರೀವೆಂಕಟೇಶ್ವರ ದೇವಸ್ಥಾನ ನಮ್ಮ ರಾಜ್ಯದಲ್ಲಿರುವುದು ನಮ್ಮ ಅದೃಷ್ಟ.
| ಚಂದ್ರಬಾಬು ನಾಯ್ಡು ಆಂಧ್ರ ಸಿಎಂ
| ಚಂದ್ರಬಾಬು ನಾಯ್ಡು ಆಂಧ್ರ ಸಿಎಂ
* ಗುಜರಾತ್ನಲ್ಲಿ ಲಡ್ಡು ಪ್ರಸಾದದ ಪರೀಕ್ಷೆ
* ರಾ.ಡೇರಿ ಅಭಿವೃದ್ಧಿ ಮಂಡಳಿ ಪರಿಶೀಲನೆ
* ಆರೋಪ ನಿಜವೆಂದ ಸಿಎಎಲ್ಎಫ್ ವರದಿ
* ಲಡ್ಡುವಿನಲ್ಲಿ ಹಂದಿ, ದನದ ಕೊಬ್ಬು ಬಳಕೆ
* ಮೀನಿನ ಎಣ್ಣೆ, ತಾಳೆ ಎಣ್ಣೆ ಮಿಶ್ರಣ ಬಯಲು
* 1803ರಲ್ಲಿ ಬೂಂದಿ ಪ್ರಸಾದ ಪರಿಚಯ
* 1940ರಲ್ಲಿ ಲಡ್ಡು ಪ್ರಸಾದ ವಿತರಣೆ ಶುರು
* 1950ರಲ್ಲಿ ಬಳಕೆ ವಸ್ತು ಪ್ರಮಾಣ ನಿಗದಿ
* ಪ್ರತಿನಿತ್ಯ 8 ಲಕ್ಷಕ್ಕೂ ಹೆಚ್ಚು ಲಡ್ಡು ತಯಾರಿ
* 620 ಬಾಣಸಿಗರಿಂದ ಲಡ್ಡು ತಯಾರಿ