ಬೆಂಗಳೂರು: ‘ಸಂಕಷ್ಟದಲ್ಲಿರುವ ಕಲಾವಿದರಿಗೆ ನೀಡಲಾಗುತ್ತಿರುವ ಮಾಸಾಶನವನ್ನು ಮುಂದಿನ ವರ್ಷದಿಂದ ₹ 3 ಸಾವಿರಕ್ಕೆ ಹೆಚ್ಚಿಸಲಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕರ್ನಾಟಕ ನಾಟಕ ಅಕಾಡೆಮಿ ನಗರದಲ್ಲಿ ಗುರುವಾರ ಹಮ್ಮಿಕೊಂಡ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2022-23ನೇ ಸಾಲಿನ, 2023-24ನೇ ಸಾಲಿನ ಹಾಗೂ 2024-25ನೇ ಸಾಲಿನ ಪ್ರಶಸ್ತಿ ವಿತರಿಸಿ, ಮಾತನಾಡಿದರು.
‘ಸದ್ಯ ಪ್ರತಿ ತಿಂಗಳು ₹ 2 ಸಾವಿರ ಮಾಸಾಶನ ನೀಡಲಾಗುತ್ತಿದೆ. 12 ಸಾವಿರಕ್ಕೂ ಅಧಿಕ ಕಲಾವಿದರು ಮಾಸಾಶನ ಪಡೆಯುತ್ತಿದ್ದಾರೆ. ಮುಂದಿನ ವರ್ಷದಿಂದ ಮಾಸಾಶನ ಹೆಚ್ಚಿಸಲಾಗುತ್ತದೆ. ಹಿಂದೆ ನಾವು ಅಧಿಕಾರದಲ್ಲಿ ಇದ್ದಾಗ ಅಕಾಡೆಮಿಗಳಿಗೆ ಹೆಚ್ಚಿನ ಅನುದಾನ ಒದಗಿಸುತ್ತಿದ್ದವು. ಬಳಿಕ ಬಂದ ಸರ್ಕಾರಗಳು ಅನುದಾನ ಕಡಿತ ಮಾಡಿದವು. ನಾವು ಈಗ ಹೆಚ್ಚಿನ ಅನುದಾನ ನೀಡಿದ್ದೇವೆ. ಮುಂದಿನ ವರ್ಷ ಅಕಾಡೆಮಿಗಳಿಗೆ ನೀಡುವ ಅನುದಾನವನ್ನು ಇನ್ನಷ್ಟು ಹೆಚ್ಚಳ ಮಾಡುತ್ತೇವೆ’ ಎಂದು ಹೇಳಿದರು.