ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಡಿಸೆಂಬರ್ 4ಕ್ಕೆ ಮುಂದೂಡಿದೆ. ಈ ಮೂಲಕ ಇನ್ನೂ ಎಂಟು ದಿನ ವಿನಯ್ ಕುಲಕರ್ಣಿಯವರಿಗೆ ಜೈಲೇ ಗತಿಯಾಗಿದೆ.
ಇಂದು ವಿನಯ್ ಕುಲಕರ್ಣಿ ಪರ ವಕೀಲರು ಧಾರವಾಡದ ಮೂರನೇ ಹೆಚ್ಚುವರಿ ಸೆಷನ್ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆಯನ್ನು ಕೋರ್ಟ್ ಡಿ.4ಕ್ಕೆ ಮುಂದೂಡಿದೆ. ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಕೀಲರು ವಾಪಸ್ ಪಡೆದಿದ್ದರು. ಇದೀಗ ಹೊಸ ಜಾಮೀನು ಅರ್ಜಿಯನ್ನು ವಿನಯ ಕುಲಕರ್ಣಿ ಪರ ವಕೀಲರು ಸಲ್ಲಿಸಿದ್ದಾರೆ. ಇಂದು ಅರ್ಜಿ ವಿಚಾರಣೆಯ ಅವಧಿ ಮುಗಿದ ಹಿನ್ನೆಲೆ ಡಿಸೆಂಬರ 4ಕ್ಕೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.
ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ತಕರಾರು ಸಲ್ಲಿಕೆಗೆ ಸಿಬಿಐ ಪರ ವಕೀಲರಿಗೆ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ. ತಕರಾರು ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಾಲಯ ಡಿ.4ರಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿಯವರನ್ನು ಬಂಧಿಸಿದ್ದು, ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ಕಾಲ ಕಳೆಯುತ್ತಿದ್ದಾರೆ.
ಇತ್ತೀಚೆಗಷ್ಟೇ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನದ ಅವಧಿಯನ್ನು ಕೋರ್ಟ್ ವಿಸ್ತರಿಸಿತ್ತು. ಧಾರವಾಡದ ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಲಯದಲ್ಲಿ ನ.23ರಂದು ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನ ವಿಚಾರಣೆ ಇತ್ತು. ಈ ವೇಳೆ ಸಿಬಿಐ ಅಧಿಕಾರಿಗಳು ಕೋರ್ಟಿಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಿದ್ದರು. ಹೀಗಾಗಿ ಹಿಂಡಲಗಾ ಜೈಲಿನಿಂದಲೇ ವಿಡಿಯೋ ಕಾನ್ಪರೆನ್ಸ್ ಮೂಲಕ ವಿನಯ್ ವಿಚಾರಣೆಗೆ ಹಾಜರಾದರು.
ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ ಡಿ.7ರವರೆಗೆ ವಿಸ್ತರಿಸಿದ್ದಾರೆ. ಇನ್ನೊಂದೆಡೆ ನವೆಂಬರ್ 9ಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದ ವಿನಯ ಪರ ವಕೀಲರು, ಸಿಬಿಐ ತಕರಾರು ಅರ್ಜಿ ಸಲ್ಲಿಸೋ ಮೊದಲೇ ತಮ್ಮ ಅರ್ಜಿಯನ್ನು ನವೆಂಬರ್ 19 ರಂದು ವಾಪಸ್ ಪಡೆದಿದ್ದರು. ಬಳಿಕ ಮರು ಅರ್ಜಿ ಸಲ್ಲಿಸುವುದಾಗಿ ಹೇಳಿದ್ದರು. ಅದರಂತೆ ಇದೀಗ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಮತ್ತೊಂದು ಕಡೆ ಯೋಗೇಶ್ ಗೌಡ ಹತ್ಯೆಯಾದಾಗ ತನಿಖಾಧಿಕಾರಿಯಾಗಿದ್ದ ಉಪನಗರ ಠಾಣೆಯ ಇನ್ಸ್ ಪೆಕ್ಟರ್ ಚನ್ನಕೇಶವ ಟಿಂಗರಿಕರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಧಾರವಾಡ ಹೈಕೋರ್ಟ್ ನವೆಂಬರ್ 30ಕ್ಕೆ ಮುಂದೂಡಿದೆ. ಟಿಂಗರಿಕರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಬಿಐ ಪರ ವಕೀಲರು ತಕರಾರು ಅರ್ಜಿ ಸಹ ಸಲ್ಲಿಸಿದ್ದಾರೆ.