ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಅಭಿಮನ್ಯು ಮುಂದಾಳತ್ವದಲ್ಲಿ ಜಂಬೂ ಸವಾರಿಗೆ ಆನೆಗಳು ಕೂಡ ತಯಾರಿ ಮಾಡುತ್ತಿವೆ. ಅಂಬಾರಿ ಹೊರುವ ಆನೆಗಳಿಗೆ ಇಷ್ಟು ದಿನ ಮರಳಿನ ಮೂಟೆ ಹೊರಿಸಿ ತಾಲೀಮು ನಡೆಸಲಾಗಿತ್ತು, ಇಂದಿನಿಂದ ಮರದ ಅಂಬಾರಿ ಹೊರುವ ತಾಲೀಮಿಗೆ ಚಾಲನೆ ನೀಡಲಾಗಿದೆ.
ಅಭಿಮನ್ಯು 280 ಕೆಜಿ ತೂಕದ ಮರದ ಅಂಬಾರಿ ಹಾಗೂ ಗಾದಿ, ನಮ್ದ ಮತ್ತು ಮರಳಿನ ಮೂಟೆ ಸೇರಿ 750 ಕೆ.ಜಿ ಭಾರ ಹೊತ್ತು ಅರಮನೆಯಿಂದ ಬನ್ನಿ ಮಂಟಪದವರೆಗೆ ಸಾಗಿದ. ದಾರಿಯುದ್ದಕ್ಕೂ ರಸ್ತೆ ಬದಿ ವ್ಯಾಪಾರಿಗಳು, ಸಾರ್ವಜನಿಕರು ಕೈಮುಗಿದು ನಮಸ್ಕರಿಸಿದರು. ವ್ಯಾಪಾರಿಗಳು ಹೂ ಮತ್ತು ಹಣ್ಣುಗಳನ್ನು ಆನೆಗಳಿಗೆ ನೀಡಿ ತಮ್ಮ ಭಕ್ತಿ ಮೆರೆದರು.
ಅಭಿಮನ್ಯು ಹಿಂದೆ ಹಿರಣ್ಯ ಮತ್ತು ಲಕ್ಷ್ಮಿ ಸಾಥ್ ನೀಡಿದವು. ಮಹೇಂದ್ರ, ಧನಂಜಯ, ಭೀಮ, ಪ್ರಶಾಂತ, ಗೋಪಿ, ಕಂಜನ್, ಸುಗ್ರೀವ, ರೋಹಿತ, ಏಕಲವ್ಯ, ದೊಡ್ಡಹರವೆ ಲಕ್ಷ್ಮೀ, ವರಲಕ್ಷ್ಮೀ ಆನೆಗಳು ಅಭಿಮನ್ಯುವನ್ನು ಅನುಸರಿಸಿದವು. ಮರದ ಅಂಬಾರಿ ಮತ್ತು ಗಜಪಡೆಯ ಪೂಜಾ ಕಾರ್ಯಕ್ರಮದಲ್ಲಿ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ಎಸಿಪಿ ಚಂದ್ರಶೇಖರ್, ವೈದ್ಯ ಮುಜೀಬ್, ಆರ್‌ಎಫ್‌ಒ ಸಂತೋಷ್ ಸೇರಿದಂತೆ ಇತರರು ಇದ್ದರು.
ಮರದ ಅಂಬಾರಿಗೆ ಪೂಜೆ
ಮೊದಲಿಗೆ ಅರಮನೆ ಅಂಗಳದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯ ಮುಂಭಾಗ ಅಭಿಮನ್ಯುವಿನ ಮೇಲೆ ಗಾದಿ ಮತ್ತು ನಮ್ದ ಕಟ್ಟಲಾಯಿತು. ನಂತರ ಆನೆಗಳನ್ನು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿವಾಸದ ಮುಂಭಾಗ ಅಂಬಾರಿ ಕಟ್ಟುವ ಜಾಗಕ್ಕೆ ಕರೆತರಲಾಯಿತು. ಅರ್ಚಕ ಪ್ರಹ್ಲಾದ್ ರಾವ್ ಗಜಪಡೆ ಹಾಗೂ ಮರದ ಅಂಬಾರಿಗೆ ಪೂಜೆ ನೆರವೇರಿಸಿದರು.
ಅಭಿಮನ್ಯು ನಂತರ ಮಹೇಂದ್ರ, ಭೀಮ, ಧನಂಜಯ, ಗೋಪಿ, ಸುಗ್ರೀವ ಆನೆಗಳಿಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗುವುದು. 280 ಕೆಜಿ ತೂಕದ ಮರದ ಅಂಬಾರಿಯೊಂದಿಗೆ ಮರಳು ಮೂಟೆ, ಗಾದಿ ಮತ್ತು ನಮ್ದ ಸೇರಿ 750 ಕೆಜಿಯ ಭಾರ ಹೊರುವ ತಾಲೀಮನ್ನು ಅಭಿಮನ್ಯು ಯಶಸ್ವಿಯಾಗಿ ಮುಗಿಸಿದ್ದಾನೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.
ಈ ಬಾರಿ ಅದ್ದೂರಿ ಮೈಸೂರು ದಸರಾ ಆಚರಣೆಗೆ ಸರ್ಕಾರ ನಿರ್ಧಾರ ಮಾಡಿದ್ದು, ಎಲ್ಲಾ ರೀತಿಯ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದೆ. ಮೈಸೂರು ದಸರಾ ವೀಕ್ಷಣೆ ಮಾಡಲು ದೇಶ ವಿದೇಶಗಳಿಂದ ಕೂಡ ಲಕ್ಷಾಂತರ ಮಂದಿ ಸಾಂಸ್ಕೃತಿಕ ನಗರಿಗೆ ಆಗಮಿಸಲಿದ್ದಾರೆ.