ಹುಬ್ಬಳ್ಳಿ: ‘ಪುಸ್ತಕ ಓದದಿದ್ದರೆ ಕನ್ನಡ ಬೆಳೆಯುವುದಿಲ್ಲ. ಪುಸ್ತಕ ಖರೀದಿಸಿ ಓದಬೇಕು’ ಎಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ಸಲಹೆ ನೀಡಿದರು.
ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಮತ್ತು ಸಾಹಿತ್ಯ ಪ್ರಕಾಶನವು ಸಾಹಿತ್ಯ ಭಂಡಾರದ ಮ.
ಅನಂತಮೂರ್ತಿ ಅವರ ಪುಣ್ಯತಿಥಿ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಪ್ರಕಾಶಕರಿಗೆ ಸನ್ಮಾನ, ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನವೋದಯ ಕಾಲಘಟದಲ್ಲಿ ಹಲವಾರು ಕೃತಿಗಳು ಮೂಡಿಬಂದರೂ, ಸರಿಯಾದ ಪ್ರಕಾಶಕರು ಇರದ ಕಾರಣ ಎಷ್ಟೋ ಸಾಹಿತಿಗಳು ಬರೆಯುವುದನ್ನೇ ನಿಲ್ಲಿಸಿದ್ದರು. ಪುಸ್ತಕ ಪ್ರಕಟ ಮಾಡದಿದ್ದರೆ ಅದು ಕನ್ನಡಕ್ಕೆ ಮಾಡುವ ದ್ರೋಹ ಎಂದು ನಂಬಿದ್ದ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ರಾಜ್ಯಪಾಲರೂ ಆಗಿದ್ದ ನಿಟ್ಟೂರು ಶ್ರೀನಿವಾಸರಾಯರು ಪುಸ್ತಕ ಪ್ರಕಾಶನ ಸಂಸ್ಥೆಯೊಂದನ್ನು ಆರಂಭಿಸಿದರು. ದೇವುಡು ನರಸಿಂಹಶಾಸ್ತ್ರಿ ಅವರ ಪುಸ್ತಕಗಳನ್ನು ಪ್ರಕಟಿಸಿ, ಸೂಕ್ತ ಗೌರವಧನವನ್ನೂ ನೀಡಿದ್ದರು’ ಎಂದು ಹೇಳಿದರು.
‘ನಾನು ಪರ್ವ ಕಾದಂಬರಿ ಬರೆಯುವಾಗ ಸಾಹಿತ್ಯ ಭಂಡಾರದ ಗೋವಿಂದರಾಯರು ಆರ್ಥಿಕ ನೆರವು ನೀಡಿದ್ದರು. ಪ್ರತಿ ಬಾರಿ ಸರಿಯಾಗಿ ಲೆಕ್ಕಾಚಾರ ಮಾಡಿ, ನೀಡಬೇಕಿದ್ದ ಹಣ ಕೊಡುತ್ತಿದ್ದರು. ಮಹಾರಾಷ್ಟ್ರದ ಪ್ರಕಾಶಕರಲ್ಲಿ ಈ ಪ್ರಾಮಾಣಿಕತೆ ಇದೆ. ಇದು ಎಲ್ಲ ಪ್ರಕಾಶಕರಲ್ಲಿ ಮೂಡಬೇಕಿದೆ’ ಎಂದರು.