ಆರ್ ಬಿ ತಿಮ್ಮಾಪೂರ ಮೇಲೆ ಭೂ ಅಕ್ರಮ ಆರೋಪ; ಅರಣ್ಯ, ಕಂದಾಯ ಭೂಮಿ ಕಬಳಿಸಿದ್ರಾ? ಸಚಿವರು
ರಾಯಚೂರು: ರಾಜ್ಯದಲ್ಲಿ ಈಗಾಗಲೆ ಮುಡಾ ಹಗರಣ (MUDA Scam), ವಾಲ್ಮೀಕಿ ಹಗರಣದಿಂದ (Valmiki Board Scam Karnataka) ವಿವಾದಕ್ಕೆ ಸಿಲುಕಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೊಂದು ಹಗರಣದ ಆರೋಪ ಕೇಳಿಬಂದಿದೆ. ಸಚಿವ ಆರ್ ಬಿ ತಿಮ್ಮಾಪುರ (RB Timmapur) ಅವರ ವಿರುದ್ಧ ಕಂದಾಯ ಇಲಾಖೆ (Revenue Department ) ಹಾಗೂ ಅರಣ್ಯ ಇಲಾಖೆ (Forest Department) ಭೂಮಿಯನ್ನು ಅಕ್ರಮವಾಗಿ ಕಬಳಿಕೆ ಮಾಡಿಕೊಂಡಿರುವ ಬಗ್ಗೆ ಗಂಭಿರ ಆರೋಪ ಕೇಳಿ ಬಂದಿದೆ.
ಆರೋಪ ಕುರಿತಂತೆ ರೈತ ಸಂಘದವರು, ಸಚಿವರ ಒಡೆತನ ಆರ್ಬಿ ಶುಗರ್ಸ್ ಕಾರ್ಖಾನೆ ವಿರುದ್ಧ ತಹಶೀಲ್ದಾರ್ ಅವರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಭೂಮಿಯನ್ನು ಅಕ್ರಮವಾಗಿ ಕಬಳಿಕೆ ಮಾಡಿಕೊಂಡಿರುವ ಬಗ್ಗೆ ಆರೋಪಿಸಿದ್ದಾರೆ.
‘ಖರೀದಿ ಮಾಡಿದ್ದೇನೆ ಕಬಳಿಸಿಲ್ಲ’
ನಾನು ಯಾವುದೇ ಅರಣ್ಯ ಭೂಮಿ ಅಥವಾ ಕಂದಾಯ ಭೂಮಿಯನ್ನು ಕಬಳಿಕೆ ಮಾಡಿಲ್ಲ ಎಂದು ಸಚಿವ ಆರ್.ಬಿ.ತಿಮ್ಮಾಪುರ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ಅವರು, ನಾವು ಖರೀದಿ ಮಾಡಿದ ಭೂಮಿಯಲ್ಲಿ ಮಾತ್ರ ಕೆಲ್ಸ ಮಾಡ್ತಿದಿವಿ. ಯಾಕೆ ಹೀಗೆ ಆಗ್ತಿದೆ ಅಂತ ಗೊತ್ತಿಲ್ಲ. ಡಾಕ್ಯುಮೆಂಟ್ ಎಲ್ಲ ತಹಶೀಲ್ದಾರ್ ಹತ್ತಿರ ಇದ್ದಾವೆ ಯಾವುದೇ ಭೂಮಿಯನ್ನು ಕಬಳಿಸಿಲ್ಲ ಎಂದ್ರು. ನಾವು ಕಳೆದ ಏಳೆಂಟು ವರ್ಷಗಳಿಂದ ರೈತರಿಂದ ಭೂಮಿಯನ್ನು ಖರೀದಿ ಮಾಡುತ್ತಿದ್ದೇವೆ ಅಕ್ರಮವಾಗಿ ವಶಪಡಿಸಿಕೊಂಡಿಲ್ಲ ಎಂದು ಹೇಳಿದ್ರು.
ದಾಖಲೆ ಪಡೆದು ಹೋರಾಟ: ಚಲುವಾದಿ ನಾರಾಯಣಸ್ವಾಮಿ
ಆರ್ ಬಿ ಶುಗರ್ಸ್ ಭೂ ಒತ್ತುವರಿ ಆರೋಪದ ಕುರಿತು ರಾಯಚೂರಿನಲ್ಲಿ ಸರ್ಕಾರದ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ಕಿಡಿ ಕಾರಿದ್ರು. ಒತ್ತುವರಿ ಮಾಡಿಕೊಳ್ಳೋದಕ್ಕೆ ಅವರ ಸ್ವಂತ ಜಮೀನಲ್ಲ, ಸರ್ಕಾರಿ ಜಮೀನುಗಳನ್ನ ಎಲ್ಲೇ ಒತ್ತುವರಿ ಮಾಡಿದ್ರೂ ನಾವು ಬಿಡೋದಿಲ್ಲ. ನಮ್ಮ ಸರ್ಕಾರ ಬಂದ್ರೆ ಎಲ್ಲವನ್ನ ಮುಟ್ಟುಗೋಲು ಹಾಕಿಕೊಳ್ತಿವಿ ಎಂದ್ರು. ಇನ್ನು ಅಧಿಕಾರಿಗಳು ಕ್ರಮಕೈಗೊಳ್ಳದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಕಡೆ ಭ್ರಷ್ಟಾರದ ಮುಳುಗಿದೆ, ತಮಗೆ ಬೇಕಾದ ಅಧಿಕಾರಿಗಳನ್ನ ಹಾಕಿ ಅವರ ಮೂಲಕ ಅಧಿಕಾರವನ್ನ ದುರುಪಯೋಗ ಮಾಡ್ತಿದ್ದಾರೆ. ಯಾರು ವಿರೋಧ ಮಾಡ್ತಾರೆ ಅವರನ್ನ ಎತ್ತಂಗಡಿ ಮಾಡ್ತಿದ್ದಾರೆ. ಹೀಗಾಗಿ ಇವತ್ತು ಕಂಟ್ರೋಲ್ ಇಲ್ಲದೇ ಸರ್ಕಾರ ನಡೀತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಬಳಿ ಮಾತನಾಡಿ ದಾಖಲೆಗಳನ್ನ ಪಡೆದು ಹೋರಾಟ ಮಾಡ್ತೇವೆ ಎಂದು ತಿಳಿಸಿದರು.