ಬೆಳಗಾವಿ: ಮ್ಯಾಟ್ ಕುಸ್ತಿಯೇ ಜನಪ್ರಿಯವಾಗುತ್ತಿರುವ ಈ ಕಾಲಘಟ್ಟದಲ್ಲೂ, ಸಾಂಪ್ರದಾಯಿಕವಾಗಿ ಮಣ್ಣಿನ ಕಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ಕುಸ್ತಿ ಪಂದ್ಯಾವಳಿ ಆಯೋಜನೆಗೆ ತಯಾರಿ ನಡೆದಿದೆ. ಈ ಬಾರಿ ಕಿತ್ತೂರು ಉತ್ಸವದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ವಿದೇಶದ ಮಹಿಳಾ ಕಲಿಗಳು ಕಾದಾಟ ನಡೆಸಲಿದ್ದಾರೆ.
ಪ್ರತಿವರ್ಷ ಅಕ್ಟೋಬರ್ 23ರಿಂದ 25ರವರೆಗೆ ಕಿತ್ತೂರು ಉತ್ಸವ ವೈಭವದಿಂದ ನೆರವೇರುತ್ತದೆ. ಕೊನೆಯ ದಿನದಂದು ರಾಷ್ಟ್ರಮಟ್ಟದ ಪುರುಷರು ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ ನಡೆಯುತ್ತಿತ್ತು. ಕಳೆದ ವರ್ಷ ಮೊದಲ ಬಾರಿ ನಡೆದಿದ್ದ ಅಂತರರಾಷ್ಟ್ರೀಯ ಪುರುಷರ ಕುಸ್ತಿ ಪಂದ್ಯಾವಳಿಯಲ್ಲಿ ವಿದೇಶದ ಇಬ್ಬರು ಜಟ್ಟಿಗಳು ಭಾಗವಹಿಸಿ, ಗಮನ ಸೆಳೆದಿದ್ದರು.
ರಾಷ್ಟ್ರಮಟ್ಟದ ಮಹಿಳೆಯರ ಕುಸ್ತಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಹರಿಯಾಣದ ಜಟ್ಟಿಗಳು ಭಾಗವಹಿಸಿದ್ದರು. ಈ ಬಾರಿ ಕಿತ್ತೂರು ಉತ್ಸವ ದ್ವಿಶತಮಾನೋತ್ಸವದ ಸಂಭ್ರಮದಲ್ಲಿದೆ. ಇದರ ಸವಿನೆನಪಿಗಾಗಿ ಇದೇ ಮೊದಲ ಬಾರಿ ಅಂತರರಾಷ್ಟ್ರೀಯ ಮಹಿಳಾ ಕುಸ್ತಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ವಿವಿಧ ದೇಶದವರ ಸಂಪರ್ಕ:
‘ಈ ಸಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಪುರುಷರು ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ ಆಯೋಜನೆಗೆ ಯೋಜನೆ ಸಿದ್ಧಪಡಿಸಿದ್ದೇವೆ. ಇಲ್ಲಿ ಮಣ್ಣಿನ ಕಣದಲ್ಲಿ ಕುಸ್ತಿ ನಡೆಯುವುದರಿಂದ ಮ್ಯಾಟ್ ಕುಸ್ತಿ ಆಡುವವರನ್ನು ಕರೆಯಿಸಲಾಗದು. ಹಾಗಾಗಿ ಉಕ್ರೇನ್, ಬಲ್ಗೇರಿಯಾ, ಜಾರ್ಜಿಯಾ, ಇರಾನ್, ಉಜ್ಬೇಕಿಸ್ತಾನ್‌ನ ಪುರುಷ ಮತ್ತು ಮಹಿಳಾ ಕುಸ್ತಿಪಟುಗಳ ಮಾಹಿತಿ ಸಂಗ್ರಹಿಸಿ, ಈಗಿನಿಂದಲೇ ಸಂಪರ್ಕಿಸುತ್ತಿದ್ದೇವೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಬಿ.ಶ್ರೀನಿವಾಸ ತಿಳಿಸಿದರು.