ಬೆಳಗಾವಿ, ಸೆಪ್ಟೆಂಬರ್ 18: ರಾಜ್ಯದಲ್ಲಿ ಈ ಬಾರಿ ಗಣೇಶೋತ್ಸವದಲ್ಲಿ ಒಂದಾದ ಮೇಲೊಂದು ಅವಘಡಗಳು ನಡೆಯುತ್ತಿದೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಲಭೆ ಬಳಿಕ ಬೆಳಗಾವಿ ಗಣೇಶೋತ್ಸವ ವಿಸರ್ಜನೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಅದ್ಧೂರಿ ಮೆರವಣಿಗೆಯ ವೇಳೆ ದುಷ್ಕರ್ಮಿಗಳು ಮೂವರು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಚಾಕು ಇರಿದಿದ್ದಾರೆ.

ಬೆಳಗಾವಿ ನಗರದ ಚೆನ್ನಮ್ಮ ವೃತ್ತದ ಬಳಿ ಮೆರವಣಿಗೆಯಲ್ಲಿ ಈ ಘಟನೆ ನಡೆದಿದ್ದು, ಸಾವಿರಾರು ಜನ ಸೇರಿದ್ದ ಮೆರವಣಿಗೆಯಲ್ಲಿ ಡಿ.ಜೆ ಸದ್ದಿಗೆ ಡ್ಯಾನ್ಸ್ ಮಾಡುವಾಗ ಕಾಲು ತಾಕಿದ್ದಕ್ಕೆ ಜಗಳ ನಡೆದಿದೆ. ಇಷ್ಟಕ್ಕೆ ಕೋಪಗೊಂಡ ಮತ್ತೊಂದು ತಂಡ ವಿದ್ಯಾರ್ಥಿಗಳ ಮೇಲೆ ಚಾಕುವಿನಿಂದ ಮನಬಂದಂತೆ ದಾಳಿ ಮಾಡಿದ್ದಾರೆ.
ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು ಹೊಟ್ಟೆ, ಕತ್ತು, ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದೆ. ಕಿಡಿಗೇಡಿಗಳ ಕೃತ್ಯದಿಂದ ಪ್ರವೀಣ್ ಗುಂಡ್ಯಾಗೋಳ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಮುಂದುವರಿದಿದೆ. ಇನ್ನು ದರ್ಶನ್ ಪಾಟೀಲ್, ಸತೀಶ್ ಪೂಜಾರಿ ಎಂಬ ವಿದ್ಯಾರ್ಥಿಗಳಿಗೆ ಬಿಮ್ಸ್ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಗೊಂಡವರು ಸಮಾಜ ಕಲ್ಯಾಣ ವಸತಿ ನಿಲಯದ ವಿದ್ಯಾರ್ಥಿಗಳಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
Laxmi News 24×7