ಬೆಳಗಾವಿ: ನಗರದಲ್ಲಿ ಮಂಗಳವಾರ ರಾತ್ರಿ ಜನವೋ ಜನ. 11 ದಿನಗಳ ಕಾಲ ಪೂಜೆಗೊಂಡ ವಿನಾಯಕನಿಗೆ ವಿದಾಯ ಹೇಳುವ ಮೆರವಣಿಗೆಯಲ್ಲಿ ಲಕ್ಷಾಂತರ ಜನಸೇರಿದರು. ಎತ್ತ ನೋಡಿದರೂ ಸಂಭ್ರಮ, ಎಲ್ಲಿ ನೋಡಿದರೂ ವೈಭವ, ಭಕ್ತಿಯ ಮಳೆ, ಉನ್ಮಾದದ ಹೊಳೆ..!
ಹೆಜ್ಜೆಹೆಜ್ಜೆಗೂ ಬೃಹತ್ ಮೂರ್ತಿಗಳ ಆಡಂಬರ.
ಝಗಮಗಿಸುವ ವಿದ್ಯುದ್ದೀಪಗಳ ವೈಭೋಗ, ಹಾಡು, ಕುಣಿತ, ಸಂಗೀತ ವಾದಕರು ಸಡಗರ, ಯುವ ಹೃದಯಗಳ ಹುಮ್ಮಸ್ಸು ಮೆರವಣಿಗೆಗೆ ಇನ್ನಿಲ್ಲದ ಕಳೆ ತಂದಿತು.
ಇಳಿಸಂಜೆಯ ಹೊತ್ತಿಗೆ ಒಂದೊಂದೇ ಯುವಕ ಮಂಡಳ ಗಣಪನ ಮೂರ್ತಿಗಳನ್ನು ಹುತಾತ್ಮ ಚೌಕಿನತ್ತ ಸಾಗಿಸಿದವು. ಅಲ್ಲಿಂದ ಆರಂಭವಾಯಿತು ಯುವಕ- ಯುವತಿಯರ ಸಂಭ್ರಮ. ಎದೆ ನಡುಗಿಸುವಂಥ ಡಿ.ಜೆ ಸೌಂಡ್ ಸಿಸ್ಟಂಗೆ ಯುವ ಸಮೂಹ ಇನ್ನಿಲ್ಲದಂತೆ ಕುಣಿದು ಕುಪ್ಪಳಿಸಿತು. ಪ್ರತಿಯೊಂದು ಮೂರ್ತಿಯ ಮುಂದೆ ಝಗಮಗಿಸುವ ಬೆಳಕಿನ ವ್ಯವಸ್ಥೆ, ಕಿವಿಗಡಚಿಕ್ಕುವ ಡಾಲ್ಬಿ ಸಂಗೀತದ ಅಬ್ಬರ.
ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಮಂಗಳವಾರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಿತು
ದೇವಾ ಶ್ರೀಗಣೇಶ, ಗಣಪತಿ ಬಪ್ಪ ಮೋರಯಾ, ಪುಡಚಾ ವರ್ಷಿ ಲೋಕರಿಯಾ, ಜೈ ಭವಾನಿ, ಜೈ ಶಿವಾಜಿ ಮುಂತಾದ ಘೋಷಣೆಗಳು ನಿರಂತರ ಮೊಳಗಿದವು. ಸಿಡಿಮದ್ದು, ಪಟಾಕಿಗಳ ಭೋರ್ಗರೆತ ನಿರಂತರವಾಗಿತ್ತು. ಗಾನೆತ್ತರಕ್ಕೆ ಚಿಮ್ಮಿದ ಪಟಾಕಿಗಳು ಆಗಸದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದವು.
ಒಂದಷ್ಟು ಮಂಡಳಿಗಳ ಸದಸ್ಯರು ಪ್ರಾರ್ಥನೆ, ನಾಮಾವಳಿಗಳನ್ನೇ ಹಾಡುತ್ತ, ಭಜನೆ ಮಾಡುತ್ತ ಹೆಜ್ಜೆ ಹಾಕಿದರು. ಬಹುಪಾಲು ಕಡೆ ಪಾಶ್ಚಿಮಾದ್ಯ ಸಂಗೀತದ್ದೇ ಅಬ್ಬರ. ಗಣಪತಿ ಮೂರ್ತಿಯನ್ನು ಒಂದು ಟ್ಟ್ರಯಾಕ್ಟರ್‌ನಲ್ಲಿ ಇಟ್ಟು, ಅದರ ಮುಂದೆ ಇನ್ನೊಂದು ಟ್ರ್ಯಾಕ್ಟರ್ ಭರ್ತಿ ಧ್ವನಿವರ್ಧಕಗಳನ್ನೇ ತುಂಬಿದ್ದರು.
ಮಹಾರಾಷ್ಟ್ರದಿಂದ ಬಂದ ಯುವತಿಯರ ನೃತ್ಯ, ಯುವತಿಯರದೇ ಡೋಲ್ ತಾಶಾ ತಂಡ, ಝಾಂಝ್ ಪಥಕ್, ಡೊಳ್ಳು ಮೇಳಗಳು, ಕೋಲಾಟದವರು, ವೇಷಗಾರರು, ಪೂರ್ಣಕುಂಭ ಹೊತ್ತವರು ಮೆರವಣಿಗೆಯ ವೈಭವ ಹೆಚ್ಚಿಸಿದರು.
30 ತಾಸು ಮೆರವಣಿಗೆ: ಈ ಬಾರಿಯೂ ನಗರದ ವಿವಿಧ ಬಡಾವಣೆಗಳಲ್ಲಿ 380ಕ್ಕೂ ಹೆಚ್ಚು ಸಾರ್ವಜನಿಕ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಕಳೆದ ವರ್ಷ ಕೂಡ ಇಷ್ಟೇ ಮೂರ್ತಿಗಳಿದ್ದವು. ಆಗ ನಿರಂತರ 30 ತಾಸು ಮೆರವಣಿಗೆ ನಡೆದಿತ್ತು. ಈ ಬಾರಿ ಕೂಡ ಬುಧವಾರ ರಾತ್ರಿಯವರೆಗೂ ಮುಂದುವರಿಯುವ ಸಾಧ್ಯತೆ ಇದೆ.