ಬೆಳಗಾವಿ: ನಗರದ ಜಲಮೂಲಗಳನ್ನು ರಕ್ಷಣೆ ಮಾಡುವಲ್ಲಿ ಈ ವರ್ಷವೂ ಮಹಾನಗರ ಪಾಲಿಕೆ ಹಿಂದೆ ಬಿದ್ದಿದೆ. ನಗರದಲ್ಲಿ ಎಲ್ಲೆಂದರಲ್ಲಿ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಈಗಾಗಲೇ ಐದು ದಿನಗಳ ಗಣಪತಿಗಳನ್ನು ವಿಸರ್ಜನೆಯೂ ಮಾಡಲಾಗಿದೆ. ಈ ಬಾರಿಯೂ ನದಿ, ಹಳ್ಳ, ಬಾವಿ, ಕೆರೆಗಳಲ್ಲಿಯೇ ವಿಸರ್ಜನೆ ಮಾಡಿದ್ದು ಬಹುಪಾಲು ಕಡೆ ಕಂಡುಬಂದಿದೆ.
‘ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಿಸಿ. ಪರಿಸರ ಸ್ನೇಹಿ ಮೂರ್ತಿಗಳನ್ನು ನಿರ್ದಿಷ್ಟವಾದ ಹೊಂಡಗಳಲ್ಲೇ ವಿಸರ್ಜಿಸಿ. ಒಂದುವೇಳೆ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ)ನಿಂದ ತಯಾರಿಸಿದ್ದ ಮೂರ್ತಿಗಳಿದ್ದರೆ, ಸಂಚಾರ ವಾಹನಗಳ ಟ್ಯಾಂಕ್‌ನಲ್ಲಿ ವಿಸರ್ಜಿಸಿ’ ಎಂದು ಮಹಾನಗರ ಪಾಲಿಕೆ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಆದರೆ, ಫಲಿತಾಂಶ ಮಾತ್ರ ಅಷ್ಟಕ್ಕಷ್ಟೇ.
‘ಗಣೇಶೋತ್ಸವಕ್ಕೆ ಮಂಗಳವಾರ ತೆರೆಬೀಳಲಿದೆ. ತಮ್ಮ ಮನೆಗಳಲ್ಲಿ ಗಣಪ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಿದ ಹಲವರು, ಉತ್ಸವದ 11ನೇ ದಿನದಂದು ವಿಸರ್ಜಿಸಲಿದ್ದಾರೆ. ಅಂದಾದರೂ ಪರಿಸರ ಸ್ನೇಹಿ ಹೆಜ್ಜೆ ಇರಿಸಬೇಕು’ ಎನ್ನುವ ಜನಾಗ್ರಹ ವ್ಯಕ್ತವಾಗಿದೆ.