ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸೇರಿ 17 ಮಂದಿ ಆರೋಪಿಗಳು ಪ್ರಸ್ತುತ ಒಂದೊಂದು ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿದ್ದ ನಟ ದರ್ಶನ್ನನ್ನು ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು.
ಬಳ್ಳಾರಿ ಜೈಲಿನಲ್ಲಿ ಇರಲು ನನಗೆ ಕಷ್ಟವಾಗುತ್ತಿದೆ ಎಂದು ನಟ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ದರ್ಶನ್ ಅವರು ಇತ್ತೀಚೆಗೆ ನಡೆದುಕೊಂಡಿರುವ ರೀತಿಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದರೆ ಅವರ ಫ್ಯಾನ್ಸ್ ಅದಕ್ಕೊಂದು ವಿಶ್ಲೇಷಣೆ ನೀಡುತ್ತಿದ್ದಾರೆ.
ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಅವರ ಸಹೋದರ ದಿನಕರ್ ತೂಗುದೀಪ ಮತ್ತು ವಕೀಲರು ಬಳ್ಳಾರಿ ಜೈಲಿಗೆ ಹೋಗಿದ್ದರು. ಅವರ ಭೇಟಿಗೆ ಸಂಜೆ 4.15ಕ್ಕೆ ದರ್ಶನ್ನನ್ನು ವಿಶೇಷ ಭದ್ರತಾ ಕೊಠಡಿಯಿಂದ ಜೈಲಿನ ಸಂದರ್ಶಕರ ಕೊಠಡಿಗೆ ಪೊಲೀಸರು ಕರೆ ತಂದಿದ್ದಾರೆ. ವಿಶೇಷ ಭದ್ರತಾ ಕೊಠಡಿಯಿಂದ ಸಂದರ್ಶಕರ ಕೊಠಡಿಗೆ ತೆರಳುತ್ತಿದ್ದ ವೇಳೆ ಕಾರಾಗೃಹದ ಗೇಟಿನ ಕಡೆ ನೋಡುತ್ತಾ ದರ್ಶನ್ ತಮ್ಮ ಎರಡು ಕೈಗಳಲ್ಲಿ ಮಧ್ಯದ ಬೆರಳನ್ನು ತೋರುಸುತ್ತಾ ಸಾಗಿದ್ದಾರೆ. ನಟನ ಈ ನಡೆ ಸದ್ಯ ಭಾರೀ ಚರ್ಚೆಯಾಗುತ್ತಿದೆ.