Breaking News

ಬೆಳಗಾವಿ ಪಾಲಿಕೆ ಅಧಿಕಾರಿಗಳಿಗೆ ಹೈಕೋರ್ಟ್ ‘ಪಾಠ’

Spread the love

ಬೆಳಗಾವಿ: ₹20 ಕೋಟಿ ತಲೆದಂಡದಿಂದ ತಪ್ಪಿಸಿಕೊಳ್ಳಲು, ಕಾಮಗಾರಿಗೆ ಬಳಸಿಕೊಂಡ ಭೂಮಿಯನ್ನು ಮರಳಿ ನೀಡಲು ಮಹಾನಗರ ಪಾಲಿಕೆ ಮುಂದಾಗಿದೆ. ಇದಕ್ಕೆ ಭೂ ಮಾಲೀಕರೂ ಒಪ್ಪಿಕೊಂಡಿದ್ದಾರೆ. ಇದರ ಮೂಲಕ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳೂ ಕೂಡ ಹೊಸ ‘ಪಾಠ’ ಕಲಿತಂತಾಗಿದೆ.

 

ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ಈ ಕುರಿತು ಬುಧವಾರ ನಡೆದ ವಿಚಾರಣೆ ವೇಳೆ ಎರಡೂ ಕಡೆಯ ಕಕ್ಷಿಗಾರರು ಒಪ್ಪಿಗೆ ಸೂಚಿಸಿದರು.

ಬೆಳಗಾವಿ ಪಾಲಿಕೆ ಅಧಿಕಾರಿಗಳಿಗೆ ಹೈಕೋರ್ಟ್ 'ಪಾಠ'

ಈ ವ್ಯಾಜ್ಯ ಗುರುವಾರ (ಸೆ.12) ನಿಗದಿಯಾಗಿತ್ತು. ಆದರೆ, ಒಂದು ದಿನ ಮುಂಚಿತವಾಗಿಯೇ ವಿಷಯ ಎತ್ತಿಕೊಂಡ ನ್ಯಾಯಮೂರ್ತಿಗಳು ಎರಡೂ ಕಡೆಯಿಂದ ದೃಢವಾದ ನಿರ್ಧಾರ ಬಯಸಿದರು. ಮುಂದಿನ ವಾರ ಇದರ ಅಂತಿಮ ತೀರ್ಪು ಕಾಯ್ದಿರಿಸಿದರು. ಸದ್ಯ ಎರಡೂ ಕಡೆಯಿಂದ ವಾದ- ಪ್ರತಿವಾದಗಳು ಮುಗಿದಿವೆ. ತೀರ್ಪು ಮಾತ್ರ ಬಾಕಿ ಇದೆ.

ಪ್ರಕರಣ ಏನು?: ನಗರದ ಎಸ್‌ಪಿಎಂ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೇ ಪಿ.ಬಿ. ರಸ್ತೆಯವರೆಗೆ ದ್ವಿಮುಖ ರಸ್ತೆ ನಿರ್ಮಾಣಕ್ಕಾಗಿ 2021ರಲ್ಲಿ 23 ಗುಂಟೆ ಜಾಗ ಬಳಸಿಕೊಳ್ಳಲಾಗಿತ್ತು. ಆದರೆ, ಭೂ ಸ್ವಾಧೀನ ಪ್ರಕ್ರಿಯೆಗೂ ಮುನ್ನವೇ ಕಾಮಗಾರಿ ಮಾಡಲಾಗಿದೆ. ಬಳಿಕ ದರ ನಿಗದಿ ಮಾಡಲಾಗಿದೆ. ಈಗ ಪರಿಹಾರ ನೀಡಿ ಸ್ವಾಧೀನ ಪ್ರಕ್ರಿಯೆ ಮುಗಿಸಬೇಕಾಗಿದೆ.

ಭೂ ಮಾಲೀಕ ಬಾಳಾಸಾಹೇಬ ಪಾಟೀಲ ಅವರಿಗೆ ಪ್ರತಿ ಚದರ್‌ ಅಡಿಗೆ ₹3,500ಕ್ಕೂ ಹೆಚ್ಚು ಪರಿಹಾರ ಕೊಡಬೇಕು ಎಂದು ಆಗಿನ ಭೂಸ್ವಾಧೀನ ಅಧಿಕಾರಿ ನಿಗದಿ ಮಾಡಿದ್ದರು. ಅದರ ಪ್ರಕಾರ ₹20 ಕೋಟಿ ಕೊಡಬೇಕಾ‌ಗಿತ್ತು.

ಈ ಎಲ್ಲ ಬೆಳವಣಿಗೆಗಳು ಪಾಲಿಕೆ ಆಡಳಿತ ಮಂಡಳಿ ಇಲ್ಲದ ಸಂದರ್ಭದಲ್ಲಿ, ಆಡಳಿತಾಧಿಕಾರಿ ನೇತೃತ್ವದಲ್ಲಿ ನಡೆದಿವೆ. ಹೀಗಾಗಿ, ಪರಿಹಾರ ಮೊತ್ತದ ಕುರಿತು ಈಗ ಪರ- ವಿರೋಧ ಚರ್ಚೆಗಳು ಶುರುವಾದವು. ಏತನ್ಮಧ್ಯೆ, ಭೂ ಮಾಲೀಕ ಬಾಳಾಸಾಹೇಬ ಧಾರವಾಡ ಹೈಕೋರ್ಟ್‌ ಮೊರೆ ಹೋದರು. ಮುಂಚಿತವಾಗಿ ಅಧಿಕಾರಿಗಳೇ ಒಪ್ಪಿಕೊಂಡಿದ್ದರಿಂದ ₹20 ಕೋಟಿ ಪರಿಹಾರ ಕೊಡಬೇಕಾಗುತ್ತದೆ ಎಂದು ಹೈಕೋರ್ಟ್‌ ಪೀಠ ಆದೇಶ ನೀಡಿತ್ತು.

ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದ ಪಾಲಿಕೆ ಅಧಿಕಾರಿಗಳು, ಬುಧವಾರ ಪೀಠದ ಮುಂದೆ ಹಾಜರಾದರು. ರಸ್ತೆಗೆ ಬಳಸಿಕೊಂಡ ಭೂಮಿಯನ್ನು ಮರಳಿ ಅದರ ಮಾಲೀಕರಿಗೇ ನೀಡುತ್ತೇವೆ ಎಂದು ಹೇಳಿಕೆ ನೀಡಿದರು. ಇದಕ್ಕೆ ಭೂ ಮಾಲೀಕರೂ ಸಮ್ಮಿತಿ ಸೂಚಿಸಿದರು ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಮುಂದಿನ ಗೊಂದಲ ಏನು?: ಕಾಮಗಾರಿ ಮಾಡಲಾದ ಜಾಗವನ್ನು ಮರಳಿ ಮಾಲೀಕರಿಗೆ ನೀಡಬೇಕೆಂದರೂ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಚರ್ಚಿಸಬೇಕೆ- ಬೇಡವೇ ಎಂಬ ಸವಾಲು ಈಗ ತಲೆದೋರಿದೆ.

ಇದೇ ಸಂಬಂಧ ಕಳೆದ ತಿಂಗಳು ನಡೆದ ಕೌನ್ಸಿಲ್‌ ಸಭೆಯಲ್ಲಿ ಆಡಳಿತ ಗುಂಪಿನ ಬಿಜೆಪಿ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್‌ ಮಧ್ಯೆ ತೀವ್ರ ವಾಗ್ವಾದ ಉಂಟಾಗಿತ್ತು.

ಪರಿಹಾರ ಕಡ್ಡಾಯವಾಗಿ ಕೊಡಲೇಬೇಕು ಎಂದು ಶಾಸಕ ಅಭಯ ಪಾಟೀಲ ಹಾಗೂ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದರು. ಮೇಯರ್‌ ಸವಿತಾ ಕಾಂಬಳೆ ಆದೇಶ ಹೊರಡಿಸಿದ್ದರು.

ಎಲ್ಲವನ್ನೂ ತಳ್ಳಿಹಾಕಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ‘ಈ ನಿರ್ಣಯ ಒಪ್ಪಿಕೊಳ್ಳುವುದಿಲ್ಲ. ಮರಳಿ ನ್ಯಾಯಾಲಯಕ್ಕೆ ಹೋಗುತ್ತೇವೆ. ಅಲ್ಲದೇ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ಮಾಡಿಸುತ್ತೇವೆ’ ಎಂದಿದ್ದರು.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ