Breaking News

ವಾರದಲ್ಲಿ ಮೂರೇ ದಿನ ವಂದೇ ಭಾರತ ರೈಲು: ಪುಣೆ -ಹುಬ್ಬಳ್ಳಿ ನಡುವೆ ಸಂಚಾರ

Spread the love

ಬೆಳಗಾವಿ: ಪುಣೆ-ಹುಬ್ಬಳ್ಳಿ ಮಧ್ಯೆ ಸೆಪ್ಟೆಂಬರ್ 16ರಿಂದ ಸಂಚರಿಸಲಿರುವ ‘ವಂದೇ ಭಾರತ್’ ಎಕ್ಸ್‌ಪ್ರೆಸ್‌ ರೈಲು ಸೇವೆ ವಾರದಲ್ಲಿ ಮೂರು ದಿನಕ್ಕೆ ಸೀಮಿತವಾಗಿದೆ.

ಹಿಂದಿನ ವೇಳಾಪಟ್ಟಿಯಂತೆ ವಾರದಲ್ಲಿ 6 ದಿನ ಪುಣೆ-ಹುಬ್ಬಳ್ಳಿ ಮಾರ್ಗದಲ್ಲಿ ವಂದೇ ಭಾರತ್‌ ರೈಲು ಸಂಚರಿಸಬೇಕಿತ್ತು.

ಈ ಮಧ್ಯೆ, ಕೊಲ್ಹಾಪುರ ಮಾರ್ಗವಾಗಿಯೂ ಇದೇ ರೈಲು ಓಡಿಸಲು ರೈಲ್ವೆ ಇಲಾಖೆ ಮುಂದಾಗಿತ್ತು. ಇದಕ್ಕೆ ಮಹಾರಾಷ್ಟ್ರದ ಜನಪ್ರತಿನಿಧಿಗಳು ಅಲ್ಲದೇ ಬೆಳಗಾವಿ, ಧಾರವಾಡ ಜಿಲ್ಲೆ ಪ್ರಯಾಣಿಕರಿಂದ ಆಕ್ಷೇಪ ವ್ಯಕ್ತವಾಯಿತು.

‘ನೇರ ಕಾರ್ಯಾಚರಣೆ ಆರಂಭಗೊಂಡರೆ ಪುಣೆ-ಹುಬ್ಬಳ್ಳಿ ಮಾರ್ಗವನ್ನು ರೈಲು 8 ಗಂಟೆ 30 ನಿಮಿಷದಲ್ಲಿ ಕ್ರಮಿಸುತ್ತದೆ. ಕೊಲ್ಹಾಪುರ ಮಾರ್ಗವಾಗಿ ಓಡಿಸಿದರೆ, ಎರಡೂವರೆ ಗಂಟೆ ಪ್ರಯಾಣ ಹೆಚ್ಚುವರಿ ಆಗುತ್ತದೆ. ಕರ್ನಾಟಕದ ಪ್ರಯಾಣಿಕರು ಆಕ್ಷೇಪಿಸಬಹುದು. ಅದಕ್ಕೆ ಈ ಮಾರ್ಗ ಕೈಬಿಡಬೇಕು. ಕೊಲ್ಹಾಪುರ-ಮುಂಬೈ ವಂದೇ ಭಾರತ್‌ ರೈಲು ಆರಂಭಿಸಬೇಕು’ ಎಂದು ಕೋರಿ ಮಹಾರಾಷ್ಟ್ರದ ಕಾರ್ಮಿಕ ಸಚಿವ ಸುರೇಶ್ ಖಾಡೆ ಮತ್ತು ಹಾತಕಣಗಲೆ ಸಂಸದ ಧೈರ್ಯಶೀಲ ಮಾನೆ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದರು.

‘ಪುಣೆ-ಹುಬ್ಬಳ್ಳಿ ವಂದೇ ಭಾರತ್ ರೈಲು ಸಂಚರಿಸುವ ಮಾರ್ಗ 558 ಕಿ.ಮೀ. ಇದೆ. ಆದರೆ, ಕೊಲ್ಹಾಪುರ ಮಾರ್ಗವಾಗಿ ರೈಲು ಸಂಚರಿಸಿದರೆ 654 ಕಿ.ಮೀ. ಆಗುತ್ತದೆ. ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಂಚರಿಸಿದರೂ ಹೆಚ್ಚುವರಿ ಎರಡೂವರೆ ಗಂಟೆ ತೆಗೆದುಕೊಂಡರೆ ಪ್ರಯೋಜನವೇನು’ ಎಂದು ಪ್ರಯಾಣಿಕರು ತಕರಾರು ತೆಗೆದಿದ್ದರು.

ಈ ಎಲ್ಲದರ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ವಾರದಲ್ಲಿ ಮೂರು ದಿನ ಪುಣೆ-ಹುಬ್ಬಳ್ಳಿ ಮತ್ತು ವಾರದಲ್ಲಿ ಮೂರು ದಿನ ಪುಣೆ-ಕೊಲ್ಹಾಪುರ ಮಾರ್ಗದಲ್ಲಿ ವಂದೇ ಭಾರತ್‌ ರೈಲು ಓಡಿಸಲು ನಿರ್ಧರಿಸಿದೆ. ಈ ಸಂಬಂಧ ರೈಲ್ವೆ ಮಂಡಳಿ ನಿರ್ದೇಶಕ (ಕೋಚಿಂಗ್‌) ಸಂಜಯ ನೀಲಮ್‌ ಗುರುವಾರ ವೇಳಾಪಟ್ಟಿ ಪ್ರಕಟಿಸಿದ್ದಾರೆ.

ಈಗಿನ ವೇಳಾಪಟ್ಟಿ ಪ್ರಕಾರ, ಪುಣೆ-ಹುಬ್ಬಳ್ಳಿ ವಂದೇ ಭಾರತ್‌ ರೈಲು (ಸಂಖ್ಯೆ 20669) ಬುಧವಾರ, ಶುಕ್ರವಾರ ಮತ್ತು ಭಾನುವಾರ ಬೆಳಿಗ್ಗೆ 5ಕ್ಕೆ ಹುಬ್ಬಳ್ಳಿಯಿಂದ ಹೊರಟು, ಮಧ್ಯಾಹ್ನ 1.30ಕ್ಕೆ ಪುಣೆ ತಲುಪಲಿದೆ. ಗುರುವಾರ, ಶನಿವಾರ ಮತ್ತು ಸೋಮವಾರ ಮಧ್ಯಾಹ್ನ 2.15ಕ್ಕೆ ಪುಣೆಯಿಂದ ಹೊರಟು, ರಾತ್ರಿ 10.45ಕ್ಕೆ ಹುಬ್ಬಳ್ಳಿ ತಲುಪಲಿದೆ.

‘ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಪ್ರಯಾಣಿಕರಿಗೆ ಪುಣೆಗೆ ಹೋಗಲು ಪ್ರತಿದಿನ ಅನುಕೂಲ ಆಗಲೆಂದು ಪುಣೆ-ಹುಬ್ಬಳ್ಳಿ ವಂದೇ ಭಾರತ್‌ ರೈಲು ಆರಂಭಿಸಲಾಗಿತ್ತು. ಆದರೆ, ಮಹಾರಾಷ್ಟ್ರದ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ವಾರದಲ್ಲಿ ಮೂರೇ ದಿನಕ್ಕೆ ಸೇವೆ ಇಳಿಸಿದ್ದು ಸರಿಯಲ್ಲ. ಮಹಾರಾಷ್ಟ್ರದವರ ಹಿತ ಕಾಯಲು ಮುಂದೆ ಸೇವೆ ಸ್ಥಗಿತಗೊಳಿಸಿದರೂ ಅಚ್ಚರಿ ಇಲ್ಲ’ ಎಂದು ರೈಲ್ವೆ ವಲಯ ಬಳಕೆದಾರರ ಸಲಹಾ ಸಮಿತಿ ಸದಸ್ಯ ಪ್ರಸಾದ ಕುಲಕರ್ಣಿ
ತಿಳಿಸಿದರು.

ಪ್ರಾಯೋಗಿಕ ಸಂಚಾರ

ಬೆಳಗಾವಿ: ಪುಣೆ -ಹುಬ್ಬಳ್ಳಿ ಮಧ್ಯೆ ಸೆ.16ರಿಂದ ಆರಂಭವಾಗಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಗುರುವಾರ ಪ್ರಾಯೋಗಿಕವಾಗಿ ಸಂಚರಿಸಿತು. ಹುಬ್ಬಳ್ಳಿಯಿಂದ ಹೊರಟ ರೈಲು ಧಾರವಾಡ ಮಾರ್ಗವಾಗಿ ಸಂಚರಿಸಿ ಮಧ್ಯಾಹ್ನ 12.19ಕ್ಕೆ ಬೆಳಗಾವಿ ನಿಲ್ದಾಣ ತಲುಪಿತು. ಇಲ್ಲಿಂದ ಮೀರಜ್‌ ಮಾರ್ಗವಾಗಿ ಪುಣೆಯತ್ತ ಸಾಗಿತು. ಈ ರೈಲು ಪ್ಲಾಟ್‌ಫಾರ್ಮ್‌ಗೆ ಬರುತ್ತಿದ್ದಂತೆ ಪ್ರಯಾಣಿಕರು ಓಡಿಬಂದು ಸೆಲ್ಫಿ ಕ್ಲಿಕ್ಕಿಸಿಕೊಂಡರು. ರೈಲಿನೊಳಗೆ ಹೋಗಿ ಆಸನಗಳು ಮತ್ತು ಸೌಲಭ್ಯಗಳನ್ನು ಆಸಕ್ತಿಯಿಂದ ವೀಕ್ಷಿಸಿದರು. ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ನೀರು ತುಂಬಿಸುವ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರು -ಧಾರವಾಡ ಮಧ್ಯೆ ಆರಂಭವಾದ ವಂದೇ ಭಾರತ್ ರೈಲು 2023ರ ನವೆಂಬರ್‌ನಲ್ಲಿ ಬೆಳಗಾವಿಯವರೆಗೂ ಪ್ರಾಯೋಗಿಕ ಸಂಚಾರ ನಡೆಸಿತ್ತು. ಬೋಗಿಗಳ ಉದ್ದಳತೆ ಆಧರಿಸಿ ಅದಕ್ಕೆ ನೀರುಣಿಸುವ ವ್ಯವಸ್ಥೆಗೆ ಯೋಜನೆ ಕಾರ್ಯಗತ ಮಾಡಲಾಗಿದೆ.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ