ಚಿಕ್ಕಮಗಳೂರು ಸೆಪ್ಟೆಂಬರ್ 13: ಕೆಎಸ್‌ಆರ್‌ಟಿಸಿ ಡಿಸಿಗೆ ಚಾಕುವಿನಿಂದ ಹಿರಿಯಲು ಯತ್ನಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಸಿಬ್ಬಂದಿಯಿಂದಲೇ ಚಾಕುವಿನಿಂದ ದಾಳಿ ನಡೆದಿದ್ದು ಸ್ವಲ್ಪದರಲ್ಲೇ ಕೆಎಸ್‌ಆರ್‌ಟಿಸಿ ಡಿಸಿ ಪಾರಾಗಿದ್ದಾರೆ. ಅಷ್ಟಕ್ಕೂ ಹಲ್ಲೆಗೆ ಕಾರಣ ಏನು?
ಹಲ್ಲೆಯಾಗಿದ್ದು ಎಲ್ಲಿ ಅನ್ನೋದಾದರೆ…
ಚಿಕ್ಕಮಗಳೂರು ಸರ್ಕಾರಿ ಬಸ್ ನಿಲ್ದಾಣದ ಒಳಗೆ ಈ ಘಟನೆ ನಡೆದಿದೆ. ಜ್ಯೂನಿಯರ್ ಅಸಿಸ್ಟೆಂಟ್ ರಿತೇಶ್ ಎಂಬುವವ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಡಿಸಿ ಈ ಹಿಂದೆ ರಿತೇಶ್ ಹಾಜರಾತಿ ಸರಿಯಿಲ್ಲ ಎಂದು ಕುಟುಂಬವನ್ನ ಕರೆಸಿ ಕೌನ್ಸಿಲಿಂಗ್ ಮಾಡಿದ್ದರು. ಕುಟುಂಬದವರ ಮನವಿ ಮೇರೆಗೆ ರಿತೇಶ್‌ನನ್ನು ಚಿಕ್ಕಮಗಳೂರಿನಿಂದ ಬೇಲೂರಿಗೆ ವರ್ಗಾವಣೆ ಮಾಡಲಾಗಿತ್ತು. ಇದು ರಿತೇಶ್್ಗೆ ಇಷ್ಟವಾಗಿರಲಿಲ್ಲ. ಇದರಿಂದ ಡಿಸಿ ಮೇಲೆ ರಿತೇಶ್ ಕೋಪಗೊಂಡಿದ್ದನು ಎನ್ನಲಾಗಿದೆ.
ಇದೇ ಕಾರಣಕ್ಕೆ ಗುರುವಾರ (ಸೆಪ್ಟೆಂಬರ್ 12) ಏಕಾಏಕಿ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಂಡ ರಿತೇಶ್ ಡಿಸಿ ಮೇಲೆ ಹಲ್ಲೆ ಮಾಡಿದ್ದಾರೆ. ಡಿಸಿ ಕೈ ಅಡ್ಡ ಕೊಟ್ಟಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಅದಾಗ್ಯೂ ಕೆಎಸ್‌ಆರ್‌ಟಿಸಿ ಡಿಸಿಯ ಎಡಗೈನ ಎರಡು ಬೆರಳುಗಳಿಗೆ ಗಾಯವಾಗಿದೆ. ಚಾಕುವಿನಿಂದ ಹಲ್ಲೆ ಮಾಡಿದ ಬಳಿಕ ಆರೋಪಿ ರಿತೇಶ್ ನಾಪತ್ತೆಯಾಗಿದ್ದಾನೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ದಾಖಲಾಗಿದೆ.