ನಾಗಮಂಗಲ (ಮಂಡ್ಯ): ಬುಧವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭ ಕೋಮುಸಂಘರ್ಷ ಏರ್ಪಟ್ಟ ಪರಿಣಾಮ ನಾಗಮಂಗಲ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ.
ಪರಿಸ್ಥಿತಿ ಹತೋಟಿಯಲ್ಲಿದ್ದರೂ ಸೆ. 14ರ ವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಗಲಭೆಯಲ್ಲಿ 6 ಅಂಗಡಿಗಳು ಸುಟ್ಟು ಕರಕಲಾಗಿವೆ.
7 ಬೈಕ್ ಹಾನಿಗೀಡಾಗಿವೆ. 1 ಕಾರಿನ ಗಾಜು ಪುಡಿಗೈಯಲಾಗಿದೆ.
ಪ್ರಕರಣ ಸಂಬಂಧ ಗುರುವಾರ 150 ಮಂದಿ ವಿರುದ್ಧ ನಾಗಮಂಗಲ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 53ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರಲ್ಲಿ 23 ಮಂದಿ ಹಿಂದೂ ಹಾಗೂ 30 ಮಂದಿ ಮುಸ್ಲಿಂ ಯುವಕರಿದ್ದಾರೆ.
ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ. ಪರಿಸ್ಥಿತಿ ಯಾವ ಸಂದರ್ಭದಲ್ಲಾದರೂ ಕೈಮೀರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಹೆಚ್ಚಿನ ಪಹರೆ ನಿಯೋಜನೆ ಮೂಲಕ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣಿಡಲಾಗಿದೆ.