ಹೊಸದಿಲ್ಲಿ: ಪುಣೆಯಲ್ಲಿ ಗಣೇಶ ವಿಗ್ರಹ ವಿಸರ್ಜನೆ ಆಚರಣೆಗಳು ಸೇರಿದಂತೆ ಉತ್ಸವದಲ್ಲಿ ಭಾಗಿಯಾಗಿರುವ ‘ಡೋಲು-ತಾಸೆ’ (dhol-tasha)ತಂಡಗಳಲ್ಲಿ 30 ಜನರ ಸಂಖ್ಯೆಯನ್ನು ನಿರ್ಬಂಧಿಸುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ( NGT) ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ಗುರುವಾರ(ಸೆ12) ತಡೆಯಾಜ್ಞೆ ನೀಡಿದೆ.
ಎನ್‌ಜಿಟಿ ಆದೇಶದ ವಿರುದ್ಧ ಪುಣೆ ಮೂಲದ ‘ಧೋಲ್-ತಾಶಾ’ ಗುಂಪಿನ ಅರ್ಜಿಯನ್ನು ಮಧ್ಯಾಹ್ನ 2 ಗಂಟೆಗೆ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರ್ಧರಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಎನ್‌ಜಿಟಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿತು.
ಸಂಕ್ಷಿಪ್ತ ವಿಚಾರಣೆಯಲ್ಲಿ, ವಕೀಲ ಅಮಿತ್ ಪೈ ಅವರು ಪುಣೆಯಲ್ಲಿ ನೂರು ವರ್ಷಗಳಿಂದ ‘ಧೋಲ್-ತಾಶಾ’ ಬಹಳ ಬೇರೂರಿದ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ ಮತ್ತು ಇದನ್ನು ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಪ್ರಾರಂಭಿಸಿದ್ದರು ಎಂದು ವಾದ ಮಂಡಿಸಿದರು. ಎನ್‌ಜಿಟಿಯ ಆಗಸ್ಟ್ 30 ರ ನಿರ್ದೇಶನವು ಸಂಘಟನೆಗಳ ಮೇಲೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ಶಬ್ದ ಮಾಲಿನ್ಯವನ್ನು ನಿಯಂತ್ರಿಸಲು ಸಂಖ್ಯೆಯನ್ನು ಮಿತಿಗೊಳಿಸಿ NGT ನಿರ್ದೇಶನ ನೀಡಿತ್ತು.