ವಿಜಯಪುರ(ದೇವನಹಳ್ಳಿ): ಜಾನಪದ ನೃತ್ಯಗಳಲ್ಲಿ ಗೊರವರ ಕುಣಿತವೂ ಒಂದು. ಆದರೆ, ಈಚೆಗೆ ಕಣ್ಮರೆಯಾಗುತ್ತಿದೆ. ಯುವ ಸಮುದಾಯ ಈ ಕಲೆಯಿಂದ ದೂರ ಉಳಿದಿದೆ. ಶ್ರೀಮಂತ ಕಲೆಯೊಂದು ಅಳಿವಿನಂಚಿನಲ್ಲಿದೆ ಎಂದು ಕಲಾವಿದ ಕೃಷ್ಣಪ್ಪ ಆತಂಕ ವ್ಯಕ್ತಪಡಿಸುತ್ತಾರೆ.
‘ನಮ್ಮ ಹಿರಿಯರಿಂದ ಸಾಂಪ್ರದಾಯಿಕವಾಗಿ ಬಂದಿರುವ ಗೊರವರ ಕುಣಿತ ಆಧುನಿಕ ಸೆಳೆತಕ್ಕೆ ಸಿಲುಕಿದೆ.
ನಮ್ಮ ತಲೆಮಾರಿಗೆ ಅಂತ್ಯವಾಗುವ ಆತಂಕವಿದೆ. ಯುವಕರು ಈ ನೃತ್ಯ ಮಾಡಲು ಮುಂದೆ ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
9ರಿಂದ 12 ಮಂದಿ ತಂಡ ಕಟ್ಟಿಕೊಂಡು ಏಳುಕೋಟಿ ಮೈಲಾರ ಲಿಂಗೇಶ್ವರ ದೇವರನ್ನು ಪೂಜಿಸಿ ಜಾತ್ರೆ, ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಕುಣಿತ ಪ್ರದರ್ಶನ ಮಾಡುವುದು ವಾಡಿಕೆ.
ಇತರ ಜಾನಪದ ಕಲೆಗಳಾದ ವೀರಗಾಸೆ, ಡೊಳ್ಳುಕುಣಿತ, ಕೋಲಾಟ, ಕಂಸಾಳೆಯಂತೆ ಗೊರವರ ಕುಣಿತವೂ ಹೆಸರು ವಾಸಿಯಾಗಿದೆ. ರಾಜ್ಯದ ಕೆಲವು ಸಾಂಸ್ಕೃತಿಕ ಉತ್ಸವಗಳಲ್ಲಿ ಮಾತ್ರ ಈ ಕಲಾ ಪ್ರದರ್ಶನ ಕಂಡು ಬರುತ್ತಿದೆ. ಉಳಿದಂತೆ ಸಾಂಪ್ರದಾಯಿಕವಾಗಿ ಬರುವ ಕಲಾವಿದರ ಸಂಖ್ಯೆಯೂ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ಜಾನಪದ ಕಲಾವಿದ ಮುನಿರಾಜು ಬೇಸರ ವ್ಯಕ್ತಪಡಿಸುತ್ತಾರೆ.
Laxmi News 24×7