ಬೆಳಗಾವಿ: ‘ದೀಪಾವಳಿ ನಂತರ ನಮ್ಮ ಸರ್ಕಾರ ಬೀಳುತ್ತದೆ ಎಂದು ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಅವರು ಇನ್ನೂ ನಾಲ್ಕು ದೀಪಾವಳಿ ಮುಗಿಯುವವರೆಗೆ ಕಾಯಬೇಕು’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ವ್ಯಂಗ್ಯ ಮಾಡಿದರು.
‘ದೀಪಾವಳಿ ನಂತರ ಕಾಂಗ್ರೆಸ್ ಸರ್ಕಾರ ಬೀಳುತ್ತದೆ’ ಎಂಬ ಬಿಜೆಪಿ ನಾಯಕರ ಮಾತಿಗೆ ನಗರದಲ್ಲಿ ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ ಸಿದ್ದರಾಮಯ್ಯ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ.
ಅವರನ್ನು ಕಂಡು ಬಿಜೆಪಿ, ಜೆಡಿಎಸ್ ಹೆದರಿಬಿಟ್ಟಿವೆ’ ಎಂದರು.
‘ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ತಪ್ಪು ಏನೂ ಇಲ್ಲ ಎಂಬುದು ಬಿಜೆಪಿಯವರಿಗೂ ಗೊತ್ತಿದೆ. ನಮ್ಮಲ್ಲಿ ನ್ಯಾಯ ವ್ಯವಸ್ಥೆ ಇದೆ. ಅಲ್ಲಿ ಸತ್ಯವಾದುದು ನಡೆಯುತ್ತದೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎನ್ನುವುದು ನಮ್ಮೆಲ್ಲರ ಆಸೆ’ ಎಂದರು.
‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೂ ಪ್ರಕರಣಗಳಿವೆ. ಆದರೆ ಬಿಜೆಪಿಯವರಿಗೆ ಸಿದ್ದರಾಮಯ್ಯ ಮಾತ್ರ ಕಾಣಿಸುತ್ತಾರೆ. ನಮ್ಮ ತಂದೆ ಎಸ್.ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ನಾನು ಸಾಕಷ್ಟು ಪ್ರಕರಣಗಳನ್ನು ನೋಡಿದ್ದೇನೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.