ಚಿಕ್ಕೋಡಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಬೀದಿನಾಯಿಗಳ ಹಾವಳಿಯಿಂದ ಜನರು ಕಂಗಾಲಾಗಿದ್ದಾರೆ.
ರಸ್ತೆ, ಮಾರುಕಟ್ಟೆ, ಕೃಷಿಭೂಮಿ, ಬೆಟ್ಟ-ಗುಡ್ಡ ಸೇರಿದಂತೆ ಎಲ್ಲೆಂದರಲ್ಲಿ ಬೀದಿನಾಯಿ ಓಡಾಡುತ್ತಿವೆ. ಇವುಗಳ ಉಪಟಳಕ್ಕೆ ಕಡಿವಾಣ ಬೀಳದ್ದರಿಂದ ಮಕ್ಕಳು, ಮಹಿಳೆಯರು, ವೃದ್ಧರು ಆತಂಕದಿಂದಲೇ ಓಡಾಡುವಂತಾಗಿದೆ.
ನಾಯಿಗಳನ್ನು ತಪ್ಪಿಸಲು ಹೋಗಿ ವಾಹನಗಳು ಹಾಗೂ ಸೈಕಲ್‌ಗಳು ನಿಯಂತ್ರಣ ತಪ್ಪಿದ ಪರಿಣಾಮ, ಹಲವು ಸವಾರರು ಬಿದ್ದು ಪೆಟ್ಟು ತಿಂದಿದ್ದಾರೆ.
ಚಿಕ್ಕೋಡಿಯ ಜನನಿಬಿಡ ಪ್ರದೇಶಗಳಾದ ಕೇಂದ್ರ ಬಸ್ ನಿಲ್ದಾಣ, ಗಾಂಧಿ ಮಾರುಕಟ್ಟೆ, ಅಂಕಲಿ ಖೂಟ, ಪುರಸಭೆ ಕಚೇರಿ ರಸ್ತೆ, ನಿಪ್ಪಾಣಿ-ಮುಧೋಳ ಹೆದ್ದಾರಿ, ಇಂದಿರಾ ನಗರ, ಸಂಜಯ ನಗರ, ರಾಜೀವ ನಗರ, ಮೆಹಬೂಬ್ ನಗರ, ವಿದ್ಯಾ ನಗರ, ಹೊಸಪೇಟೆ ಗಲ್ಲಿ, ಮುಲ್ಲಾ ಪ್ಲಾಟ್, ಜಾರಿ ಗಲ್ಲಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದೆ.
‘ಮಾಂಸದ ಅಂಗಡಿಯವರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿರುವುದು. ಪಶುವೈದ್ಯರು ಹಲವು ವರ್ಷಗಳಿಂದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡದಿರುವ ಕಾರಣ, ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದೆ’ ಎಂಬ ಆರೋಪ ಕೇಳಿಬರುತ್ತಿದೆ.
5,146 ಜನರಿಗೆ ಕಡಿತ:
ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕಿನಲ್ಲಿ 2024ರ ಜನವರಿ 1ರಿಂದ ಆಗಸ್ಟ್ 31ರವರೆಗೆ 5,146 ಜನರಿಗೆ ಬೀದಿನಾಯಿ ಕಚ್ಚಿರುವ ಬಗ್ಗೆ ವರದಿಯಾಗಿದೆ. ಜನವರಿಯಲ್ಲಿ 638, ಫೆಬ್ರುವರಿಯಲ್ಲಿ 649, ಮಾರ್ಚ್‌ನಲ್ಲಿ 701, ಏಪ್ರಿಲ್‌ನಲ್ಲಿ 791, ಮೇನಲ್ಲಿ 657, ಜೂನ್‌ನಲ್ಲಿ 573, ಜುಲೈನಲ್ಲಿ 549, ಆಗಸ್ಟ್‌ನಲ್ಲಿ 588 ಜನರು ಬೀದಿನಾಯಿ ಕಡಿತಕ್ಕೆ ಒಳಗಾಗಿದ್ದಾರೆ.
Laxmi News 24×7