ವಿಜಯಪುರ: ರಾಜ್ಯದಲ್ಲಿ ಸಿದ್ದರಾಮಯ್ಯ (Siddaramaiah) ಸಿಎಂ ಆಗಿದ್ದಾರೆ, ಸಿಎಂ ಆಗಿಯೇ ಮುಂದುವರೆಯುತ್ತಾರೆ ಎಂದು ಸಚಿವ ಎಂಬಿ ಪಾಟೀಲ್ (MB Patil) ಹೇಳಿದ್ದಾರೆ.
ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಎಂ ಬಿ ಪಾಟೀಲ್, ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರ ಪಾತ್ರದ ಕುರಿತು ಯಾವುದೇ ಹುರಳಿಲ್ಲ, ಪಾತ್ರವಿಲ್ಲ.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರಿಗೆ ಹಾಗಾಗುತ್ತೆ ಹೀಗಾಗುತ್ತೆ ಎಂದು ಯಾರಾದ್ರೂ ತಿಳಿದುಕೊಂಡಿದ್ದರೆ ಅದು ಆಗಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನ ಕೆಲ ನಾಯಕರು ದೆಹಲಿಗೆ ಹೋಗಿರುವ ವಿಚಾರದ ಬಗ್ಗೆ ಮಾತನಾಡಿದ ಎಂಬಿ ಪಾಟೀಲ್, ದೆಹಲಿಗೆ ಹೋಗಬಾರದು ಅಂತೇ ಏನಾದ್ರು ಇದೆಯಾ? ನಾನು ದೆಹಲಿಗೆ ಹೋಗುತ್ತಿದ್ದೇನೆ. ಕೇಂದ್ರ ಸಚಿವರನ್ನ ಭೇಟಿಯಾಗಲು ದೆಹಲಿಗೆ ಹೋಗುತ್ತಿದ್ದೇನೆ. ದೆಹಲಿಗೆ ಹೋಗುವುದರಲ್ಲಿ ತಪ್ಪಿಲ್ಲ, ವರಿಷ್ಠರನ್ನ ಭೇಟಿಯಾಗುತ್ತಿರುತ್ತಾರೆ ಎಂದರು. ಸತೀಶ್ ಜಾರಕಿಹೊಳಿ ಸಿಎಂ ಆಗಲು ಲಕ್ಷ್ಮಣ ಸವದಿ ಬೆಂಬಲ ನೀಡಿದ ವಿಚಾರದ ಬಗ್ಗೆ ಮಾತನಾಡಿದ ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ ಇರಲಿ, ಎಂ ಬಿ ಪಾಟೀಲ್ ಇರಲಿ, ಯಾರೇ ಇರಲಿ. ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ ಎಂದರು.
ಶಿವಾನಂದ ಪಾಟೀಲ್ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವ ಎಂಬಿ ಪಾಟೀಲ್, ನಾನು ಮತ್ತು ಡಿಕೆಶಿ ಸೀನಿಯರ್ ಇದ್ದೇವೆ. ಸತೀಶ ಜಾರಕಿಹೊಳಿಗಿಂತ ನಾನು ಸೀನಿಯರ್. ಪರಮೇಶ್ವರ್ ಅವರು ನಾವೆಲ್ಲ ಒಂದೇ ಹಂತದಲ್ಲಿದ್ದೇವೆ. ನಮಗಿಂತ ಮೇಲಿನ ಹಂತದ ಸೀನಿಯರ್ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರೆ. ಸಿದ್ದರಾಮಯ್ಯ, ಆರ್ ವಿ ದೇಶಪಾಂಡೆ ಅವರಿದ್ದಾರೆ. ಸಿಎಂ ಮಾಡುವ ವೇಳೆ ಸೀನಿಯರ್ ಜೂನಿಯಾರಿಟಿ ಪ್ರಶ್ನೆ ಬರಲ್ಲ, ಈಗ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಹೇಳಿದರು.
ಶಿವಾನಂದ ಪಾಟೀಲ್ ಜೆಡಿಎಸ್‌ನಿಂದ ಬಂದವರು ಎಂದ ಎಂ ಬಿ ಪಾಟೀಲ್ ಹೇಳಿಕೆಗೆ ಸಿದ್ದರಾಮಯ್ಯ ಸಹ ಜೆಡಿಎಸ್‌ನಿಂದ ಬಂದವರು ಎಂಬ ಶಿವಾನಂದ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಂ ಬಿ ಪಾಟೀಲ್, ಸಸಿದ್ದರಾಮಯ್ಯ ಅವರದ್ದು ಸ್ಪೆಷಲ್ ಕೇಸ್, ಅವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ತಪ್ಪು. ಅವರದ್ದು ದೊಡ್ಡ ವ್ಯಕ್ತಿತ್ವ, ಸಿದ್ದರಾಮಯ್ಯ ದೊಡ್ಡ ನಾಯಕರು ಎಂದು ಹೇಳಿದರು.
2004 ರಲ್ಲಿ ನನಗಾಗಿ ಶಿವಾನಂದ ಪಾಟೀಲ್ ತ್ಯಾಗ ಮಾಡಿದರು ಎಂದು ಅವರ ಸಹೋದರ ವಿಜುಗೌಡ ಪಾಟೀಲ್ ಹೇಳುತ್ತಾನೆ. 2004 ರಲ್ಲಿ ಎಸ್ ಎಂ ಕೃಷ್ಣ ನನ್ನ ಕರೆದು ಶಿವಾನಂದ ಪಾಟೀಲ್ ಕಾಂಗ್ರೆಸ್ ಸೇರುತ್ತಾರೆ, ನಿನ್ನ ಅಭಿಪ್ರಾಯವೇನು ಎಂದು ಕೇಳಿದ್ದರು ಎಂದ ಎಂಬಿ ಪಾಟೀಲ್, ನನ್ನ ಮತಕ್ಷೇತ್ರದ ಬಗ್ಗೆ ಮಾತ್ರ ನನಗೆ ಅಸಕ್ತಿ ಇದೆ, ಅದು ಬಿಟ್ಟು ಏನೂ ಇಲ್ಲ ಎಂದಿದ್ದೆ. ನಾನು ಶಿವಾನಂದ ಪಾಟೀಲ್ ರನ್ನು ಕಾಂಗ್ರೆಸ್ ಗೆ ಕರೆ ತಂದಿಲ್ಲ, ಕಾಂಗ್ರೆಸ್ ಗೆ ಬರಲು ವಿರೋಧವನ್ನೂ ವ್ಯಕ್ತಪಡಿಸಿಲ್ಲ ಎಂದು ಹೇಳಿದರು.