ಇಂದು ಗಣೇಶ ಚತುರ್ಥಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದರೆ, ಕೆಲವರ ಮನೆಗಳಲ್ಲಿ ಕರಾಳತೆ ಆವರಿಸಿದೆ. ಹಬ್ಬದ ದಿನವೇ ನಡೆದ ದುರಂತಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದಲ್ಲಿ ಯುವಕರು ಜೀವ ಬಿಟ್ಟು ಮನೆಯಲ್ಲಿ ಕಗ್ಗತ್ತಲಿಗೆ ದೂಡಿರುವುದು ಒಂದೆಡೆಯಾದರೆ, ಇವರು ಮಾಡಿರುವ ನೇತ್ರದಾನದಿಂದ ನಾಲ್ವರ ಬದುಕು ಬೆಳಕು ಬಂದಂತಾಗಿದೆ.
ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಈ ಘಟನೆ ನಡೆದಿರುವುದು ಚಿಕ್ಕಮಗಳೂರು ಜಿಲ್ಲೆಯಲ್ಲಿ.
ಹೌದು, ಎಲ್ಲ ಯುವಕರಂತೆ ಗಣೇಶ ಚತುರ್ಥಿಗೆ ಗಣಪನನ್ನು ಕರೆತರಲು ಉತ್ಸಾಹದಿಂದ ಹೊರಟವರು ಮನೆಗೆ ಬಂದಿದ್ದು ಹೆಣವಾಗಿ. ಏಕೆಂದರೆ ಮಾರ್ಗಮಧ್ಯೆದಲ್ಲೇ ನಡೆದ ದಾರುಣ ಅಪಘಾತದಲ್ಲಿ ಇಬ್ಬರು ಯುವಕರು ಜೀವಬಿಟ್ಟಿದ್ದರು. ಗಣಪತಿ ಮೂರ್ತಿ ತರಲು ಯುವಕರು ಹೋಗುತ್ತಿದ್ದ ಮಿನಿ ಗೂಡ್ಸ್ ವಾಹನ ಪಲ್ಟಿಯಾಗಿ ದೊಡ್ಡ ದುರಂತವೇ ನಡೆದು ಹೋಯಿತು.
ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಸಹ್ಯಾದ್ರಿಪುರ ನಿವಾಸಿಗಳಾದ ಶ್ರೀಧರ ಮತ್ತು ಧನುಷ್ ಅಪಘಾತದಲ್ಲಿ ಮೃತಪಟ್ಟರು. ಗಣಪತಿ ಮೂರ್ತಿ ತರಲು ಗ್ರಾಮದ ಯುವಕರು ಟಾಟಾ ಏಸ್ ಮಾಡಿಕೊಂಡು ಏಳು ಮಂದಿ ತರೀಕೆರೆಯತ್ತ ಹೊರಟಿದ್ದಾಗ ಈ ಅವಘಡ ನಡೆದು ಹೋಗಿದೆ. ಭೈರಾಪುರ ಬಳಿ ತಿರುವಿನಲ್ಲಿ ವಾಹನ ಪಲ್ಟಿಯಾಗಿ ಎಲ್ಲರೂ ಗಾಯಗೊಂಡಿದ್ದರು.
ಗ್ರಾಮದ ಮಂಜು, ವರುಣ್, ಗುರುಮೂರ್ತಿ, ಚಂದ್ರಶೇಖರ್ ಮತ್ತು ಸಂದೀಪ್ ಗಾಯಗೊಂಡಿದ್ದರು ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು. ಆದರೆ, ಹಬ್ಬದ ಸಂಭ್ರಮ ಈ ಇಬ್ಬರ ಪ್ರಾಣವನ್ನೇ ಕಸಿಯಿತು.
ಮತ್ತೊಂದೆಡೆ ಇಂತಹ ಗಾಢವಾದ ನೋವಿನಲ್ಲೂ ಮೃತ ಯುವಕರ ಕುಟುಂಬಸ್ಥರು ಸಾರ್ಥಕತೆಯ ಹೆಜ್ಜೆ ಇಡುವ ಮೂಲಕ ಮಾದರಿ ಎನಿಸಿಕೊಂಡಿದ್ದಾರೆ. ಮೃತ ಯುವಕರ ನೇತ್ರದಾನ ಮಾಡಲು ಇಬ್ಬರೂ ಪೋಷಕರು ನಿರ್ಧರಿಸಿದ್ದು, ಇದರಿಂದ ನಾಲ್ವರು ಅಂಧರ ಬಾಳಿಗೆ ಬೆಳಕು ದೊರೆಯಲಿದೆ.
ಮೃತ ಯುವಕ ಶ್ರೀಧರ್ ಪೋಷಕರಾದ ಕುಬೇಂದ್ರ ಮತ್ತು ಪದ್ಮಾ ದಂಪತಿ, ಮೃತ ಧನುಷ್ ಪೋಷಕರಾದ ರಮೇಶ್ ಹಾಗೂ ಶೋಭಾ ದಂಪತಿ ಅವರು ತಮ್ಮ ಮಕ್ಕಳ ನೇತ್ರದಾನಕ್ಕೆ ಸಮ್ಮತಿ ಸೂಚಿಸಿದ್ದಾರೆ.