ಬೆಂಗಳೂರು: ರಾಜ್ಯದ ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಲು ರಾಜ್ಯ ಸರ್ಕಾರ ಮತ್ತೆ 3 ವಾರ ಕಾಲಾವಕಾಶ ಕೇಳಿದೆ.
ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಜಿ.ಪಂ., ತಾ.ಪಂ. ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಜತೆಗೆ, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಲು ಏಕಸದಸ್ಯ ನ್ಯಾಯಪೀಠ ಆದೇಶ ಪಾಲಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು 2023ರಲ್ಲಿ ಸಲ್ಲಿಸಲಾದ 2 ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳು ನ್ಯಾಯಮೂರ್ತಿ ವಿ. ಕಾಮೇಶ್ವರ್ ರಾವ್ ಹಾಗೂ ನ್ಯಾ| ಕೆ.
ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿದ್ದವು.
ಈ ವೇಳೆ ರಾಜ್ಯ ಸರಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಹಾಜರಾಗಿ, ಎಲ್ಲ 31 ಜಿಲ್ಲೆಗಳಲ್ಲಿ ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳ ಪುನರ್‌ವಿಂಗಡಣೆ ಕಾರ್ಯ ಮುಗಿದಿದೆ. ಈಗ ಮೀಸಲಾತಿ ನಿಗದಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕಾಗಿ 3 ವಾರ ಕಾಲಾವಕಾಶಬೇಕು ಎಂದು ಕೋರಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಸೆ. 30ಕ್ಕೆ ಮುಂದೂಡಿತು.