ದೊಡ್ಡನಗರ (ಸಕಲೇಶಪುರ): ಒಂದೆಡೆ ವರ್ಷ ಕಳೆದರೂ ಕಲ್ಯಾಣ ಕಾರ್ಯಕ್ರಮಗಳಿಗೇ ಸೀಮಿತ ಎಂಬ ಅಪವಾದ. ಮತ್ತೊಂದೆಡೆ ಮುಖ್ಯ ಮಂತ್ರಿ ಸೇರಿ ಸರಕಾರದ ಮೇಲೆ ಸರಣಿ ಹಗರಣಗಳ ಆರೋಪ. ಈ ಕರಿಮೋಡದ ಅಂಚಿನಲ್ಲಿ ಈಗ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ ಮೂಲಕ ಅಭಿವೃದ್ಧಿಯ “ಬೆಳ್ಳಿಗೆರೆ’ ಮೂಡುತ್ತಿದೆ.
ಇದು ಬರದ ನಾಡಿಗೆ ನೀರನ್ನು ಹರಿಸುವುದರ ಜತೆಗೆ ಸರಕಾರಕ್ಕೆ ಅಭಿವೃದ್ಧಿಯ ಗರಿಯನ್ನು ಮುಡಿಸಲಿದೆ.
ಎತ್ತಿನಹೊಳೆಯಿಂದ ಹರಿಯುವ ನೀರನ್ನು ಎತ್ತುವ ಪ್ರಮುಖ ಘಟ್ಟಕ್ಕೆ ಸರ ಕಾರ ಗೌರಿ ಹಬ್ಬದಂದು ಚಾಲನೆ ನೀಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಯ 1ನೇ ಹಂತವನ್ನು ಶುಕ್ರ ವಾರ ಮಧ್ಯಾಹ್ನ 1 ಗಂಟೆಗೆ ಸಕಲೇಶ ಪುರ ತಾಲೂಕಿನ ಹೆಬ್ಬನಹಳ್ಳಿ ಬಳಿ ನಡೆ ಯುವ ಬೃಹತ್ ಸಮಾರಂಭದಲ್ಲಿ ಲೋಕಾರ್ಪಣೆ ಮಾಡುವರು. ಬಳಿಕ ಹೆಬ್ಬನಹಳ್ಳಿ ವಿತರಣ ತೊಟ್ಟಿ 4ರಲ್ಲಿ ಗಂಗೆಗೆ ಬಾಗಿನ ಅರ್ಪಿಸುವ ಮೂಲಕ ಅಪರಾಹ್ನ 2 ಗಂಟೆಗೆ ಎತ್ತಿನಹೊಳೆ ಸಮಗ್ರ ಕುಡಿಯವ ನೀರಿನ ಯೋಜನೆಗೆ ಅಧಿ ಕೃತ ಚಾಲನೆ ದೊರೆ ಯ ಲಿದೆ. ಈ ಮೂಲಕ ಕುಡಿಯುವ ನೀರಿನ ತತ್ವಾರ ಇರುವ ಬೆಂಗಳೂರು ಗ್ರಾಮಾಂತರ ಸಹಿತ ಏಳು ಜಿಲ್ಲೆಗಳಿಗೆ ನೀರು ಪೂರೈಕೆ ಆಗಲಿದೆ.