ಬೆಳಗಾವಿ: ಬರದ ಹಿನ್ನೆಲೆಯಲ್ಲಿ ಕಳೆದ ಬಾರಿ ಮಂಕಾಗಿದ್ದ ಗಣೇಶೋತ್ಸವ, ಈ ಬಾರಿ ಕಳೆಗಟ್ಟಿದೆ. ವಿವಿಧ ರಂಗಗಳಲ್ಲಿ ಆರ್ಥಿಕ ವಹಿವಾಟು ಚೇತರಿಕೆ ಕಂಡಿದ್ದು, ‘ಚೌತಿ’ ಸಂಭ್ರಮ ಇಮ್ಮಡಿಗೊಂಡಿದೆ. ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು 10ರಿಂದ 25 ಅಡಿವರೆಗಿನ ಎತ್ತರದ ಮೂರ್ತಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ.
ಇಲ್ಲಿನ ಬಿ.ಎಸ್.ಯಡಿಯೂರಪ್ಪ ಮಾರ್ಗದ ಗೋದಾಮಿನಲ್ಲಿ ಕಲಾವಿದ ಮನೋಹರ ಪಾಟೀಲ, ಅವರ ಪುತ್ರರಾದ ವಿನಾಯಕ ಹಾಗೂ ಪ್ರಸಾದ ಹಲವು ದಶಕಗಳಿಂದ ಗಣೇಶನ ಮೂರ್ತಿ ತಯಾರಿಕೆ ಕಾಯಕದಲ್ಲಿ ತೊಡಗಿದ್ದಾರೆ. ಅವರ ಬಳಿ 20 ಕಾರ್ಮಿಕರು ದುಡಿಯುತ್ತಿದ್ದಾರೆ. ಬೆಳಿಗ್ಗೆ 7ಕ್ಕೆ ಕಲಾಕುಂಚ ಹಿಡಿದರೆ, ಮಧ್ಯರಾತ್ರಿ 12ರವರೆಗೂ ಬೆವರು ಹರಿಸುತ್ತಿದ್ದಾರೆ.
ಈ ವರ್ಷ 50ಕ್ಕೂ ಅಧಿಕ ಸಾರ್ವಜನಿಕ ಗಣೇಶನ ಮೂರ್ತಿ ತಯಾರಿಸಿರುವ ಪಾಟೀಲ ಕುಟುಂಬಸ್ಥರು, ಅವುಗಳಿಗೆ ಅಂತಿಮ ಸ್ಪರ್ಶ ಕೊಡುತ್ತಿದ್ದಾರೆ. ವೈವಿಧ್ಯಮಯ ವಿನ್ಯಾಸಗಳ ಸೀರೆ, ಆಲಂಕಾರಿಕ ವಸ್ತುಗಳಿಂದ ‘ವಿಘ್ನ ನಿವಾರಕ’ನನ್ನು ಸಿಂಗರಿಸುತ್ತಿದ್ದಾರೆ.