ಬೆಂಗಳೂರು,ಸೆ.2- ಬಿಜೆಪಿ ಸರ್ಕಾರದ ಅವಧಿಯಲ್ಲಿನ ಎಲ್ಲಾ ಹಗರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಸಾವಿನ ನಡುವೆಯೂ ಹಣ ಲೂಟಿ ಹೊಡೆದಿದ್ದಾರೆ. ಪಿಎಸ್‌ಐ, ಬಿಟ್ ಕಾಯಿನ್ ಹಗರಣ ಸೇರಿದಂತೆ ಎಲ್ಲವನ್ನೂ ತನಿಖೆಗೊಳಪಡಿಸಲಾಗಿದೆ. ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೋವಿಡ್ ಸಂದರ್ಭದಲ್ಲಿನ ಹಗರಣಗಳಿಗೆ ಆಗಿನ ಸಚಿವರೇ ಹೊಣೆಗಾರರು ಎಂದ ಎಂ.ಬಿ.ಪಾಟೀಲ್, ವೈದ್ಯಕೀಯ ಕಾಲೇಜುಗಳ ನಿರ್ಮಾಣದಲ್ಲಿ ಏಕಾಏಕಿ ಹಲವಾರು ಪಟ್ಟು ಯೋಜನಾ ವೆಚ್ಚವನ್ನು ಹೆಚ್ಚಿಸಲಾಗಿದೆ.
ಸುಮಾರು 15-20 ಸಚಿವ ಸಂಪುಟ ಸಭೆಗಳಲ್ಲಿ ಈ ಬಗ್ಗೆ ನಿರಂತರ ಚರ್ಚೆಯಾಗಿದೆ. 300-400 ಕೋಟಿ ರೂ. ಏಕಾಏಕಿ ಹೆಚ್ಚಿಸುವ ಬಗ್ಗೆ ಸಚಿವ ಪರಮೇಶ್ವರ್ ಸೇರಿದಂತೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ನಮ ಅನಿವಾರ್ಯತೆಗಳು ಹೇಗಿದ್ದವು ಎಂದರೆ, ಅವರ ಕಾಲದಲ್ಲಿ ಮಾಡಿದ್ದ ಭ್ರಷ್ಟಾಚಾರ ಕಣ್ಣೆದುರಿಗೇ ಇದ್ದರೂ ಬಾಕಿ ಉಳಿದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವ ಪರಿಸ್ಥಿತಿ ಎದುರಾಗಿತ್ತು. ಇಲ್ಲವಾದರೆ ಕಾಮಗಾರಿ ಅರ್ಧಕ್ಕೇ ನಿಲ್ಲುತ್ತಿತ್ತು. ಯೋಜನೆ ವ್ಯರ್ಥವಾಗುತ್ತಿತ್ತು. ಜನರಿಗೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಾಕಿ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ ಎಂದರು.