ಶಿರ್ವ: ದುರಾಸೆ ದೇಶದಲ್ಲಿ ರೋಗವಾಗಿ ಬೆಳೆಯುತ್ತಿದ್ದು, ಯುವಜನತೆ ಹೆತ್ತವರ ಸಹಕಾರದೊಂದಿಗೆ ಇದ್ದುದರಲ್ಲಿಯೇ ಸಂತಸ ಪಡುವ ಗುಣಗಳನ್ನು ಬೆಳೆಸಿಕೊಂಡಲ್ಲಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಸಾಧ್ಯ.ಮಾನವೀಯತೆ ಇದ್ದರೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ.
ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರಾಮಾಣಿಕ ಬದುಕು ಕಟ್ಟಿಕೊಳ್ಳುವುದ ರೊಂದಿಗೆ ಸಮಾಜದ ಭಾವನೆಗಳನ್ನು ಬದಲಾಯಿಸಬಹುದು ಎಂದು ಸರ್ವೋತ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜ| ಎನ್.ಸಂತೋಷ್ ಹೆಗ್ಡೆ ಹೇಳಿದರು.
ಅವರು ಸೆ.1 ರಂದು ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಎಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ನಡೆದ ಮಾರ್ಗದರ್ಶನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಬಳಿಕ ವಿದ್ಯಾರ್ಥಿಗಳು ಮತ್ತು ಹೆತ್ತವರೊಂದಿಗೆ ಸಂವಾದ ನಡೆಸಿದರು.
ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿ ಉತ್ತಮ ಶಿಕ್ಷಣ ನೀಡಲು ಬದ್ಧವಾಗಿರುವ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿ ಬೆಳೆಯಬೇಕಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಸಂಸ್ಥೆಯ ಬೆಳವಣಿಗೆಗೆ ಕೈಗನ್ನಡಿಯಾಗಿದೆ. ಅಧ್ಯಯನದೊಂದಿಗೆ ಉತ್ತಮ ವಿಷಯಗಳ ಬಗ್ಗೆ ಚಿಂತನೆ ನಡೆಸಿ ಸಂಕಲ್ಪ ಶುದ್ಧಿಯೊಂದಿಗೆ ಸಾಧನೆ ಮಾಡಿ ಎಂದು ಹೇಳಿದರು. ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ|ಲೊಲಿಟಾ ಪ್ರಿಯಾ ಕ್ಯಾಸ್ತಲಿನೊ ಅತಿಥಿ ಪರಿಚಯ ಮಾಡಿದರು.