ಹುಬ್ಬಳ್ಳಿ: ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ತನಿಖೆ ಮಾಡಲಿ ನಮಗೆ ಯಾವುದೇ ತೊಂದರೆಯಿಲ್ಲ. ಯಾರಾದರು ಭ್ರಷ್ಟಾಚಾರ ಮಾಡಿದ್ದರೆ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಕೋವಿಡ್ ಕಾಲದ ಹಗರಣದ ಬಗ್ಗೆ ಇವರಿಗೆ ನೆನಪಾಗಲಿಲ್ಲವಾ?
ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದ್ದರೂ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಪ್ರಕರಣ 2005-06ರಲ್ಲಿ ಆಗಿದ್ದು. 2013ರಿಂದ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರು. ಆಗ ತನಿಖೆ ಮಾಡಿಸಬಹುದಿತ್ತಲ್ಲ. ವಿನಾಕಾರಣ ಆ ಪ್ರಕರಣವನ್ನು ಕಾಂಗ್ರೆಸ್ ಮುನ್ನೆಲೆಗೆ ತರುವ ಕೆಲಸ ಮಾಡುತ್ತಿದೆ. 2018ರಲ್ಲಿ ಕುಮಾರಸ್ವಾಮಿ ಅವರ ಕೈ ಕಾಲು ಬಿದ್ದು ಮುಖ್ಯಮಂತ್ರಿಯಾಗಿ ಮಾಡಿದ್ದು ನೀವೆ ಅಲ್ಲವೇ ? ಎಂದು ಪ್ರಶ್ನಿಸಿದರು.
ಪರಸ್ಪರ ಬಿಚ್ಚಿಡುವ ಹೆದರಿಕೆಯಿಂದ ಬಿಜೆಪಿ ಬಾಯಿ ಬಂದ್ ಮಾಡಲು ಆಗುವುದಿಲ್ಲ. ಯಾರು ತಪ್ಪು ಮಾಡಿರುತ್ತಾರೆ ಅವರ ವಿರುದ್ಧ ಕ್ರಮವಾಗಲಿ. ಎಲೆಕ್ಟ್ರೋ ಬಾಂಡ್ ನಲ್ಲಿ ಎಲ್ಲವೂ ಕಾನೂನು ಬದ್ಧವಾಗಿ ಹಣ ಬಂದಿದೆ. ಕಾಂಗ್ರೆಸ್ ಕೂಡ ಹಣ ಪಡೆದಿದೆ. ಈ ವಿಚಾರದಲ್ಲಿ ಪ್ರಧಾನಮಂತ್ರಿ ರಾಜೀನಾಮೆ ಕೊಡಬೇಕು ಎಂಬುವುದು ಚೈಲ್ಡಿಶ್ ಹೇಳಿಕೆ. ನಾವು ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತು ಹಾಕುತ್ತೇವೆ ಎಂದು ಜೋಶಿ ಹೇಳಿದರು.