ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಮಾತುಗಳು ಜೋರಾಗಿ ಕೇಳಿಬರುತ್ತಿರುವುದರ ನಡುವೆಯೇ ಈ ರೇಸ್‌ಗೆ ಮತ್ತೊಬ್ಬ ಕಾಂಗ್ರೆಸ್ ನಾಯಕ ಇಳಿದಿದ್ದಾರೆ. ಸಿದ್ದರಾಮಯ್ಯ ಅವರ ನಂತರ ಡಿ.ಕೆ.ಶಿವಕುಮಾರ್ ಅವರೇ ಸಿಎಂ ಕುರ್ಚಿಯ ಪ್ರಬಲ ಆಕಾಂಕ್ಷಿ ಎನ್ನುವ ಗುಸುಗುಸು ಇದೆ.
ಇದಲ್ಲದೆ ಈಗಾಗಲೇ ಹಲವು ಕಾಂಗ್ರೆಸ್ ನಾಯಕರು ಸಿಎಂ ಆಗುವ ಬಗ್ಗೆ ಕನಸು ಕಾಣುತ್ತಿದ್ದಾರೆ.
ಈಗ ಈ ಸಿಎಂ ರೇಸ್‌ಗೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಕೂಡ ಇಳಿದಿದ್ದಾರೆ. ತಾವು ಕೂಡ ಸಿಎಂ ಆಗಬೇಕು ಎನ್ನುವ ಕನಸನ್ನು ಬಿಚ್ಚಿಟ್ಟಿದ್ದು, ನಮ್ಮ ಹೈಕಮಾಂಡ್ ಒಪ್ಪಿದರೆ ಹಾಗೂ ಈಗಿನ ಸಿಎಂ ಸಿದ್ದರಾಮಯ್ಯ ಅವರು ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಒಪ್ಪಿದರೆ ನಾನೇ ಸಿಎಂ ಆಗುತ್ತೇನೆ. ಈಗ ಆ ಸ್ಥಾನದ ಬದಲಾವಣೆ ಪ್ರಶ್ನೆಯೇ ಇಲ್ಲ. ನಾನು ಸಿದ್ದರಾಮಯ್ಯ ಅವರಿಗಿಂತ ಎರಡು ವರ್ಷ ಹಿರಿಯ. ಇಲ್ಲಿಯವರೆಗೂ ಪದೇ ಪದೇ ಸಚಿವನಾಗಿ ನನಗೆ ಸಾಕಾಗಿದೆ. ಇನ್ನೇನಿದ್ದರೂ ಮುಖ್ಯಮಂತ್ರಿ ಆಗಬೇಕು ಅಷ್ಟೇ ಎಂದಿದ್ದಾರೆ.
ನನಗೂ ಎಲ್ಲ ನಾಯಕರಂತೆ ಸಿಎಂ ಆಗಬೇಕು ಎನ್ನುವ ಆಸೆ ಇದೆ. ಜೀವನದಲ್ಲಿ ಮಹತ್ವಾಕಾಂಕ್ಷೆ ಇರಬೇಕು. ಆದರೆ, ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ನನಗೆ ತಿಳಿಯದೆ ಅಂತಹ ಯಾವ ಚರ್ಚೆಯೂ ನಡೆಯಲು ಸಾಧ್ಯವೇ ಇಲ್ಲ ಎಂದು ದೇಶಪಾಂಡೆ ಹೇಳಿದ್ದಾರೆ. ಇನ್ನು ಈ ಹೇಳಿಕೆ ಬೆನ್ನಲ್ಲೇ ಸಿಎಂ ಬದಲಾವಣೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಎಚ್.ಸಿ.ಮಹದೇವಪ್ಪ ಸೇರಿದಂತೆ ಹಲವರು ಈಗಾಗಲೇ ಸಿಎಂ ರೇಸ್‌ನಲ್ಲಿದ್ದಾರೆ ಎಂದು ಬಿಜೆಪಿ ನಾಯಕರು ಆಗಾಗ ಕಾಂಗ್ರೆಸ್ ಪಕ್ಷದ ವಿರುದ್ಧ ಹಾಸ್ಯ ಮಾಡುತ್ತಿದ್ದರು. ಇದೀಗ ದೇಶಪಾಂಡೆ ಅವರ ಹೆಸರು ಕೂಡ ರೇಸ್‌ಗೆ ಸೇರ್ಪಡೆಯಾಗಿದೆ.
ಮುಡಾ ಕೇಸ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರವಿದೆ. ಹಾಗಾಗಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಕಳೆದುಕೊಳ್ಳಬಹುದು ಎಂದು ಹೇಳಲಾಗಿತ್ತು. ಅಲ್ಲದೆ ಮುಂದಿನ ಮುಖ್ಯಮಂತ್ರಿ ಬಗ್ಗೆಯೂ ಜೋರಾದ ಮಾತುಗಳು ಕೇಳಿಬಂದಿದ್ದವು.